ಬೆಂಗಳೂರು: ನಗರದಲ್ಲಿ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

Update: 2020-09-19 16:58 GMT

ಬೆಂಗಳೂರು, ಸೆ.19: ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸಲು ಜಾರಿಗೆ ತರಲಾಗಿರುವ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು 10 ರಸ್ತೆಗಳಲ್ಲಿ ಜಾರಿಗೊಳಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿನ 85 ರಸ್ತೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅದರ ಭಾಗವಾಗಿ ಮೊದಲಿಗೆ 10 ರಸ್ತೆಗಳಲ್ಲಿ ಬಿಲ್ಡಿಂಗ್ ಕಂಟ್ರೋಲ್ ಸೆಲ್ಯೂಷನ್ಸ್ ಇಂಡಿಯಾ ಸಂಸ್ಥೆ ವತಿಯಿಂದ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ಕಸ್ತೂರಬಾ ರಸ್ತೆ ಮತ್ತು ಸೇಂಟ್‍ಮಾರ್ಕ್ಸ್ ರಸ್ತೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಮುಂದುವರಿದಂತೆ ಇದೀಗ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗಿದೆ.

985 ವಾಹನಗಳಿಗೆ ಅವಕಾಶ: ಪ್ರಸ್ತುತ ಜಾರಿ ಮಾಡಿರುವ 10 ರಸ್ತೆಗಳಲ್ಲಿ ಅಂದಾಜು 470 ಕಾರುಗಳು, 500 ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶವಿದೆ. ವ್ಯವಸ್ಥೆ ಜಾರಿಗೊಳಿಸುವ ಹೊಣೆ ಹೊತ್ತಿರುವ ಸಂಸ್ಥೆ ಮುಂದಿನ 10 ವರ್ಷಗಳವರೆಗೆ ವಾಹನ ನಿಲುಗಡೆಗೆ ಯಾವುದೇ ಸಮಸ್ಯೆಯಾದಂತೆ ವಿನ್ಯಾಸ ಸಿದ್ಧಪಡಿಸಿದೆ. ಅದರ ನಿರ್ವಹಣೆಯನ್ನು ಅದೇ ಸಂಸ್ಥೆ ಮಾಡಲಿದೆ. ಅದಕ್ಕೆ ಬದಲಾಗಿ ಸಂಸ್ಥೆ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡಬಹುದಾಗಿದೆ. ಬಿಬಿಎಂಪಿಗೆ ವಾರ್ಷಿಕ 31.56 ಕೋಟಿ ರೂ. ಶುಲ್ಕ ಪಾವತಿಸಲಾಗುತ್ತದೆ.

ಆ್ಯಪ್ ಆಧಾರಿತ ವ್ಯವಸ್ಥೆ: ವಾಹನ ನಿಲುಗಡೆಗೆ ಸ್ಥಳಾವಕಾಶದ ಬಗ್ಗೆ ಮಾಹಿತಿ ಪಡೆಯುವವರು, ನಿಲುಗಡೆ ನಂತರ ಶುಲ್ಕ ಪಾವತಿ ಮಾಡಲು ಸ್ಮಾರ್ಟ್ ಪಾರ್ಕಿಂಗ್ ಮೊಬೈಲ್ ಆ್ಯಪ್ ಅನ್ನ ಬಳಸಬೇಕಿದೆ. ವಾಹನ ಮಾಲಕರು ಯುಪಿಐನಂತಹ ಡಿಜಿಟಲ್ ಪೇಮೆಂಟ್ ಆ್ಯಪ್, ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಮೂಲಕ ಶುಲ್ಕಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಯಾವೆಲ್ಲ ರಸ್ತೆಗಳಲ್ಲಿ ಪಾರ್ಕಿಂಗ್: ಕಸ್ತೂರಬಾ ರಸ್ತೆ, ಕನ್ನಿಂಗ್‍ ಹ್ಯಾಂ ರಸ್ತೆ, ಎಂ.ಜಿ.ರಸ್ತೆ, ಸೇಂಟ್‍ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಮ್ಯೂಸಿಯಂ ಕ್ರಾಸ್ ರಸ್ತೆ, ವಿಠ್ಠಲಮಲ್ಯ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಚರ್ಚ್‍ಸ್ಟ್ರೀಟ್, ಅಲಿ ಅಸ್ಗರ್ ರಸ್ತೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶುಲ್ಕದ ಮಾಹಿತಿ: ಎ ವಲಯದಲ್ಲಿ ಕಾರಿಗೆ 30 ರೂ., ದ್ವಿಚಕ್ರ ವಾಹನಕ್ಕೆ 15 ರೂ., ಬಿ ವಲಯದಲ್ಲಿ ಕಾರಿಗೆ 20ರೂ.ಗಳು ಹಾಗೂ ದ್ವಿಚಕ್ರ ವಾಹನಕ್ಕೆ 10 ರೂ.ಗಳು, ಸಿ ವಲಯದಲ್ಲಿ ಕಾರಿಗೆ 10 ರೂ. ಹಾಗೂ ದ್ವಿಚಕ್ರ ವಾಹನಕ್ಕೆ 5 ರೂ.ಗಳನ್ನು ನಿಗದಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News