ಭೂಗಳ್ಳರಿಂದ ನನಗೆ ನ್ಯಾಯ ಕೊಡಿಸಿ: ಜನತಾ ಅದಾಲತ್‍ನಲ್ಲಿ ರೈತ ಮಹಿಳೆಯ ಅಳಲು

Update: 2020-09-19 17:04 GMT

ಬೆಂಗಳೂರು, ಸೆ.19: ನನಗೆ ಒಂದಷ್ಟು ತುಂಡು ಭೂಮಿಯಿದೆ. ಇದರಿಂದ ಜೀವನೋಪಾಯ ನಡೆಯುತ್ತಿದೆ. ಆದರೆ, ಭೂಗಳ್ಳರು ನನ್ನ ಜಮೀನಿಗೆ ಹೋಗಲು ದಾರಿ ಇಲ್ಲದಂತೆ ಸುತ್ತಲು ಬೇಲಿ ಹಾಕಿಬಿಟ್ಟಿದ್ದಾರೆ. ಹೀಗಾಗಿ ಈ ಭೂಮಿಯನ್ನು ಮಾರಾಟ ಮಾಡದೆ ವಿಧಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮಹಿಳೆ ತಮ್ಮ ನೋವನ್ನು ತೋಡಿಕೊಂಡಿದ್ದಾಳೆ.

ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ ಜನಾಂದೋಲನ ಭಾಗವಾಗಿ ನಗರದ ಆಶೀರ್ವಾದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನತಾ ಅದಾಲತ್‍ನಲ್ಲಿ ರಾಜ್ಯದ 22 ಜಿಲ್ಲೆಗಳಿಂದ ಭೂ ಕಬಳಿಕೆಗೆ ಸಂಬಂಧಿಸಿದಂತೆ 23 ಪ್ರಕರಣಗಳ ಸಂತ್ರಸ್ತರ ಅಳಲನ್ನು ನಿವೃತ್ತ ನ್ಯಾ.ನಾಗಮೋಹನ್‍ದಾಸ್ ನೇತೃತ್ವದ ತೀರ್ಪುಗಾರರ ಮಂಡಳಿ ಆಲಿಸಿತು. 

ಸರಕಾರ ಕೈಗೊಳ್ಳುವ ವಿವಿಧ ಯೋಜನೆಗಳಿಗಾಗಿ ಭೂ ಸ್ವಾಧೀನ, ಬಗರ್ ಹುಕುಂ ಕಾಯ್ದೆಯ ದುರ್ಬಳಕೆ, ಭೂಗಳ್ಳರಿಂದ ಜಮೀನು ಮಾಲಕರ ಮೇಲಾಗುತ್ತಿರುವ ಕಿರುಕುಳ, ರಿಯಲ್ ಎಸ್ಟೇಟ್ ಮಾಫಿಯಾದಿಂದಾಗಿ ಬೀಳಾಗುತ್ತಿರುವ ಫಲವತ್ತಾದ ಕೃಷಿ ಭೂಮಿ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ದಲಿತರ ಮತ್ತು ಸಣ್ಣ ರೈತರ ಭೂಮಿಯನ್ನು ಕಾನೂನು ಬಾಹಿರವಾಗಿ ಕಬಳಿಸಿರುವುದರ ಕುರಿತು ಸಂತ್ರಸ್ತರು ಜನತಾ ಅದಾಲತ್‍ನಲ್ಲಿ ತಮ್ಮ ನೋವನ್ನು ತೋಡಿಕೊಂಡರು ಹಾಗೂ ನ್ಯಾಯಕ್ಕಾಗಿ ಬೇಡಿಕೆ ಇಟ್ಟರು.

ಪರಿಸರ ತಜ್ಞ ಡಾ.ಅ.ನ.ಯಲ್ಲಪ್ಪ ರೆಡ್ಡಿ, ಹಿರಿಯ ಬರಹಗಾರ ನಾಗೇಶ್ ಹೆಗ್ಡೆ, ಪ್ರೊ.ಎಂ.ಕೆ.ರಮೇಶ್, ಡಾ.ಎ.ಆರ್.ವಾಸವಿ ಮತ್ತು ರೇಣುಕಾ ವಿಶ್ವನಾಥನ್ ಒಳಗೊಂಡ ನ್ಯಾಯಮಂಡಳಿಯು ಜನತಾ ಅದಾಲತ್‍ಗೆ ಬಂದ ಎಲ್ಲ ಪ್ರಕರಣಗಳನ್ನು ಆಲಿಸಿದ್ದು, ಪರಿಶೀಲಿಸಿ ಸೆ.24ರಂದು ತೀರ್ಪನ್ನು ಕೊಡಲಿದೆ ಎಂದು ಆಂದೋಲನ ಸಮಿತಿಯ ಪರವಾಗಿ ವಿನಯ್ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News