ಡ್ರಗ್ಸ್ ದಂಧೆ ಆರೋಪ: ಅಕುಲ್ ಬಾಲಾಜಿ, ನಟ ಸಂತೋಷ್ ಕುಮಾರ್ ವಿಚಾರಣೆ ನಡೆಸಿದ ಸಿಸಿಬಿ

Update: 2020-09-19 17:22 GMT

ಬೆಂಗಳೂರು, ಸೆ.19: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನೆಮಾ ಕಲಾವಿದರ ಸರಣಿ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಇನ್ನು ಹಲವು ಕಲಾವಿದರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಚಿತ್ರರಂಗದ ಅಕುಲ್ ಬಾಲಾಜಿ, ನಟ ಸಂತೋಷ್ ಕುಮಾರ್ ಯಾನೆ ಆರ್ಯನ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್ ಅನ್ನು ವಿಚಾರಣೆ ನಡೆಸಿದ ತನಿಖಾಧಿಕಾರಿಗಳು, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು. ಸದ್ಯ ಈ ಮೂವರು ನೀಡಿರುವ ಮಾಹಿತಿ ಅನ್ವಯ ಇನ್ನೂ ಕೆಲ ಮಂದಿಗೆ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಓರ್ವ ವಶಕ್ಕೆ: ಈ ಮೂವರು ವ್ಯಕ್ತಿಗಳ ಪೈಕಿ ಓರ್ವರನ್ನು ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಲು ತನಿಖಾಧಿಕಾರಿಗಳು ಮುಂದಾಗಿದ್ದು, ಇದಕ್ಕಾಗಿ ಕಾನೂನು ಪ್ರಕ್ರಿಯೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೈಭವ್‍ನೊಂದಿಗೆ ಸಂತೋಷ್?: ಸಂತೋಷ್ ಕುಮಾರ್ ವಿಚಾರಣೆ ವೇಳೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ವೈಭವ್ ಜೈನ್ ಜೊತೆ ಸಂಪರ್ಕದಲ್ಲಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸಂತೋಷ್ ಹಾಗೂ ವೈಭವ್ ಜೈನ್ ಒಟ್ಟಿಗೆ ವ್ಯಾಪಾರ ಮಾಡುತ್ತಿದ್ದರು. ಇದಕ್ಕಾಗಿ ದೇವನಹಳ್ಳಿ ಬಳಿಯಿರುವ ಬೃಹತ್ ಕಟ್ಟಡವೊಂದನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದರು. ತದನಂತರ, ಈ ಕಟ್ಟಡದಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಬಂದ ಹಣವನ್ನು ಈ ಇಬ್ಬರು ಹಂಚಿಕೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

‘ಚೈನ್ ಲಿಂಕ್ ಇದ್ದಂತೆ'

ಡ್ರಗ್ಸ್ ಪ್ರಕರಣ ‘ಒಂದಕ್ಕೊಂದು ಚೈನ್ ಲಿಂಕ್ ಇದ್ದಂತೆ', ಓರ್ವನನ್ನು ವಶಕ್ಕೆ ಪಡೆದರೆ, ಬಂಧಿಸಿದರೆ ಪೂರ್ಣ ಮಾಹಿತಿ ದೊರೆಯುವುದಿಲ್ಲ. ಹೀಗಾಗಿ, ತನಿಖೆಯ ಹಾದಿ ಇನ್ನಷ್ಟು ದೊಡ್ಡದಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News