ದಿಲ್ಲಿ: ಮುಂದಿನ ವಾರದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ

Update: 2020-09-22 03:48 GMT

ಹೊಸದಿಲ್ಲಿ, ಸೆ.22: ದಿಲ್ಲಿ ಸರಕಾರ ಎಲೆಕ್ಟ್ರಿಕ್ ವಾಹನ ನೀತಿಯನ್ನು ಆಗಸ್ಟ್ 7ರಂದು ಘೋಷಿಸಿದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ 1,280 ಹೊಸ ವಿದ್ಯುತ್ ಚಾಲಿತ ವಾಹನಗಳು ನೋಂದಣಿಯಾಗಿದೆ. ಆದರೆ ಈ ವಾಹನಗಳ ಮಾಲಕರಿಗೆ ಇನ್ನೂ ಸರಕಾರದ ಭರವಸೆಯಂತೆ ಸಬ್ಸಿಡಿ ಸೌಲಭ್ಯ ಸಿಕ್ಕಿಲ್ಲ. ರಾಜ್ಯ ಸರಕಾರ ಇನ್ನೂ ಎಲೆಕ್ಟ್ರಿಕ್ ವಾಹನ ನಿಧಿಯನ್ನು ಸ್ಥಾಪಿಸದಿರುವುದು ಇದಕ್ಕೆ ಕಾರಣ. ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ಮನ್ನಾ ಸೇರಿದಂತೆ ಸಬ್ಸಿಡಿ ಸೌಲಭ್ಯ ಮುಂದಿನ ವಾರದಿಂದ ನೀಡಲಾಗುವುದು ಎಂದು ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಹೇಳಿದ್ದಾರೆ.

ಮೊದಲ ಒಂದು ಸಾವಿರ ವಿದ್ಯುತ್‌ಚಾಲಿತ ಚತುಷ್ಚಕ್ರ ವಾಹನಗಳಿಗೆ ತಲಾ 1.5 ಲಕ್ಷ ರೂಪಾಯಿವರೆಗೆ (ಪ್ರತಿ ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯಕ್ಕೆ 10 ಸಾವಿರ ರೂ.) ಸಬ್ಸಿಡಿ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿತ್ತು. ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಆಟೊರಿಕ್ಷಾ ಮತ್ತು ಸರಕು ಸಾಗಣೆ ವಾಹನಗಳಿಗೆ 30 ಸಾವಿರ ರೂಪಾಯಿವರೆಗೆ (ಪ್ರತಿ ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯಕ್ಕೆ 5 ಸಾವಿರ ರೂಪಾಯಿ) ಸಬ್ಸಿಡಿ ದೊರಕಲಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ವಿನಾಯ್ತಿಯೂ ಇರುತ್ತದೆ. ಸದ್ಯ ರಸ್ತೆ ತೆರಿಗೆ ವಾಹನದ ವೆಚ್ಚಕ್ಕೆ ಅನುಸಾರವಾಗಿ ಶೇಕಡ 4ರಿಂದ 10ರವರೆಗೆ ಇದೆ. ನೋಂದಣಿ ಶುಲ್ಕ ಪ್ರತಿ ವಾಹನಕ್ಕೆ 3 ಸಾವಿರ ರೂಪಾಯಿ ಇದೆ.

ಆಗಸ್ಟ್ 7ರ ಬಳಿಕ ಇದುವರೆಗೆ ವಾಹನ ಖರೀದಿಸಿದವರಿಗೆ ಕೂಡಾ ಈ ಸೌಲಭ್ಯ ಸಿಗಲಿದೆಯೇ ಎಂಬ ಬಗ್ಗೆ ಸರಕಾರದಿಂದ ಸ್ಪಷ್ಟತೆ ಸಿಕ್ಕಿಲ್ಲ. ಸಬ್ಸಿಡಿ ಮತ್ತು ತೆರಿಗೆ ಮನ್ನಾಗೆ ಸಾರಿಗೆ ಇಲಾಖೆಯಿಂದ ಪ್ರತ್ಯೇಕ ಅಧಿಸೂಚನೆಯ ಅಗತ್ಯವಿದ್ದು, ಇದುವರೆಗೆ ಈ ಸಂಬಂಧ ಅಧಿಸೂಚನೆ ಹೊರಡಿಸಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಗಸ್ಟ್ 7ರ ಬಳಿಕ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದವರಿಗೆ ಈ ಸೌಲಭ್ಯ ಸಿಗಲಿದೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಸೌಲಭ್ಯ ದೊರಕುವುದಾದರೆ ಸಾರಿಗೆ ಇಲಾಖೆ ಅರ್ಹತೆಯ ನಿಗದಿತ ದಿನಾಂಕವನ್ನು ಆಗಸ್ಟ್ 7 ಎಂದು ಅಧಿಸೂಚನೆಯಲ್ಲಿ ಸೇರಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News