ಬಿಲ್ಡರ್, ಇಬ್ಬರು ಭೂಮಾಪಕರ ಮನೆಗಳ ಮೇಲೆ ಎಸಿಬಿ ದಾಳಿ

Update: 2020-09-22 15:50 GMT

ಬೆಂಗಳೂರು, ಸೆ.22: ಸರಕಾರಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಆರೋಪ ಸಂಬಂಧ ಇಬ್ಬರು ಭೂ ಮಾಪಕರು, ಓರ್ವ ಬಿಲ್ಡರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದರು.

ಬೆಂಗಳೂರು ದಕ್ಷಿಣ ತಾಲೂಕಿನ ಭೂಮಾಪಕರಾದ ಉಮೇಶ್ ಅವರ ನಾಗರಭಾವಿ 2ನೆ ಹಂತದಲ್ಲಿನ ವಾಸದ ಮನೆ ಹಾಗೂ ಕೃಪಾ ಅವರ ಮಾಗಡಿ ರಸ್ತೆಯಲ್ಲಿರುವ ಮನೆ, ಅದೇ ರೀತಿ ಬಿಲ್ಡರ್ ಕಿಶೋರ್ ಕುಮಾರ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ಇಲ್ಲಿನ ಕೆಂಗೇರಿ ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮವೊಂದರ ಸರ್ವೆ ನಂ.3, ಮೂಲತಃ ಸರಕಾರಿ ಜಮೀನಾಗಿದ್ದು, ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ಸರಕಾರಿ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡುವ ಮುಖೇನ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟ್ಯಂತರ ರೂ.ಗಳ ಬೆಲೆ ಬಾಳುವ ಸರಕಾರಿ ಜಮೀನನ್ನು ಖಾಸಗಿಯವರ ಪಾಲಾಗುವಂತೆ ಮಾಡಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಬಗ್ಗೆ ಕಂದಾಯ ಇಲಾಖೆಯ ಹಾಗೂ ಭೂಮಾಪನ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳುವಂತೆ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಈ ದಾಳಿ ನಡೆದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News