ರಾತ್ರಿಯೂ ಪ್ರತಿಭಟನೆ ಮುಂದುವರಿಸಿದ ಅಮಾನತುಗೊಂಡ ರಾಜ್ಯಸಭಾ ಸಂಸದರು

Update: 2020-09-22 08:00 GMT
Photo: ANI

ಹೊಸದಿಲ್ಲಿ,ಸೆ.22: ಸದನದಲ್ಲಿ ಕೋಲಾಹಲ ನಡೆಸಿರುವುದಕ್ಕೆ ಸೋಮವಾರ ಅಮಾನತುಗೊಂಡಿದ್ದ ವಿಪಕ್ಷಗಳ 8 ಸದಸ್ಯರುಗಳು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ರಾತ್ರಿ ಕಳೆಯುವ ಮೂಲಕ ಪ್ರತಿಭಟನೆ ಮುಂದುವರಿಸಿದ್ದಾರೆ. ಮಂಗಳವಾರ ಬೆಳಗ್ಗೆ ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಪ್ರತಿಭಟನನಿರತರನ್ನು ಭೇಟಿಯಾಗಿ ಚಹಾ-ತಿಂಡಿ ಸೇವಿಸಿ ಮನವೊಲಿಸಲು ಯತ್ನಿಸಿದರು.

ಹರಿವಂಶ್ ಅವರು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒಬ್ರಿಯಾನ್ ಹಾಗೂ ಡೋಲಾ ಸೇನ್, ಆಮ್ ಆದ್ಮಿ ಪಕ್ಷದ ಸಂಜೀವ್ ಸಿಂಗ್, ಕಾಂಗ್ರೆಸ್ ನಾಯಕರಾದ ರಾಜೀವ್ ಸಟಾವ್, ರಿಪುನ್ ಬೊರಾ ಹಾಗೂ ಸಯ್ಯದ್ ನಾಸಿರ್ ಹುಸೈನ್, ಸಿಪಿಎಂನ ಕೆಕೆ ರಾಗೇಶ್ ಹಾಗೂ ಇಲಮರಮ್ ಕರೀಮ್ ಅವರನ್ನು ಭೇಟಿಯಾದರು. ನೆಲದ ಮೇಲೆ ಕುಳಿತುಕೊಂಡ ಹರಿವಂಶ್ ಪ್ರತಿಭಟನಾ ಸ್ಥಳದಲ್ಲಿ ಸಂಸದರೊಂದಿಗೆ ಚಹಾ ತಿಂಡಿ ಸೇವಿಸಿದರು.

ಹರಿವಂಶ್‌ಜೀ ಸಹೋದ್ಯೋಗಿಯಾಗಿ ನಮ್ಮನ್ನು ಭೇಟಿಯಾಗಿದ್ದಾರೆಯೇ ಹೊರತು ರಾಜ್ಯಸಭೆಯ ಉಪ ಸಭಾಪತಿಯಾಗಿ ಅಲ್ಲ. ಅವರು ನಮಗಾಗಿ ಟೀ ಹಾಗೂ ಸ್ನಾಕ್ಸ್ ತಂದಿದ್ದರು. ಅಮಾನತು ವಿರುದ್ಧ ನಾವು ನಿನ್ನೆಯಿಂದ ಪ್ರತಿಭಟನೆ ಆರಂಭಿಸಿದ್ದೇವೆ. ನಾವು ರಾತ್ರಿ ಇಡೀ ಇಲ್ಲೇ ಇದ್ದೆವು ಎಂದು ಬೊರಾ ಹೇಳಿದ್ದಾರೆ.

ಸರಕಾರದ ಯಾರೂ ಕೂಡ ಇಲ್ಲಿಗೆ ಬಂದು ನಮ್ಮನ್ನು ವಿಚಾರಿಸಿಲ್ಲ. ಹಲವು ವಿಪಕ್ಷ ನಾಯಕರು ನಮ್ಮನ್ನು ವಿಚಾರಿಸಿ ಒಗ್ಗಟ್ಟು ಪ್ರದರ್ಶಿಸಿದರು ಎಂದು ಬೋರಾ ಹೇಳಿದ್ದಾರೆ.

ಉಪ ಸಭಾಪತಿ ಹರಿವಂಶ್ ಸಿಂಗ್ ಅವರೊಂದಿಗೆ ಅಶಿಸ್ತಿನ ವರ್ತನೆ ತೋರಿದ ಕಾರಣಕ್ಕೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಎಂಟು ಸಂಸದರನ್ನು ಒಂದು ವಾರ ಕಾಲ ಅಮಾನತುಗೊಳಿಸಿದ್ದರು. ಅಮಾನತುಗೊಂಡ ಬಳಿಕ ಸದಸ್ಯರು ಸದನದಿಂದ ಹೊರಹೋಗಲು ನಿರಾಕರಿಸಿದರು. ವಿಪಕ್ಷಗಳ ಪ್ರತಿಭಟನೆಯ ನಡುವೆ ಹಲವು ಬಾರಿ ಸದನವನ್ನು ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News