ಕೃಷಿ ಮಸೂದೆಗೆ ಬೆಂಬಲ ನೀಡಿದ ರೈತರ ಬಗ್ಗೆ ಟ್ವಿಟ್ಟರಿಗರ ಸಂಶಯ

Update: 2020-09-22 11:47 GMT
Twitter(@free_thinker)

ಹೊಸದಿಲ್ಲಿ: ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ರೈತ ಸಂಘಟನೆಗಳು ಸಿಡಿದೆದ್ದಿವೆ. ಆದರೆ ಸುದ್ದಿ ಸಂಸ್ಥೆ ಎಎನ್‍ಐ  ಕಾನ್ಪುರ್‍ನಿಂದ ಪ್ರಕಟಿಸಿದ ಒಂದು ವರದಿಯಲ್ಲಿ ಆ ಜಿಲ್ಲೆಯ ರೈತರು ಹೊಸ ಕೃಷಿ ಮಸೂದೆಗಳನ್ನು ಬೆಂಬಲಿಸಿದ್ದಾರೆ ಎಂದು ಬರೆದಿದೆ. "ನಾವು ಕೃಷಿ ಮಸೂದೆಯನ್ನು ಬೆಂಬಲಿಸುತ್ತೇವೆ ಆದರೆ ಕೇಂದ್ರ ಸರಕಾರ ರೈತರ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಸರಕಾರ ಮಧ್ಯವರ್ತಿಗಳನ್ನು ದೂರಗೊಳಿಸಬೇಕು ಹಾಗೂ ರೈತರು ಆತ್ಮಹತ್ಯೆಗೈಯ್ಯದಂತೆ ನೋಡಿಕೊಳ್ಳಬೇಕು,'' ಎಂದು ಕೆಲ ರೈತರು ಹೇಳಿದ್ದಾರೆಂದು ಎಎನ್‍ಐ ವರದಿ ತಿಳಿಸಿದೆ. ಈ ಕುರಿತಂತೆ ಎಎನ್‍ಐ ಮಾಡಿದ ಟ್ವೀಟ್ ಹೀಗಿತ್ತು "ಕಾನ್ಪುರ್: ಜಿಲ್ಲೆಯ ರೈತರು ಹೊಸ ಕೃಷಿ ಸುಧಾರಣಾ ಮಸೂದೆಗಳನ್ನು ಸ್ವಾಗತಿಸಿದ್ದಾರೆ.''

ತನ್ನ ಟ್ವೀಟ್ ಜತೆಗೆ ಎಎನ್‍ಐ ತಾನು ಸಂಪರ್ಕಿಸಿದ ನಾಲ್ಕು ರೈತರ ಜತೆಗಿನ ಸಂದರ್ಶನದ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇದು ದೇಶದ ವಿವಿಧೆಡೆಗಳ ರೈತರು ಕೃಷಿ ಮಸೂದೆಗಳ ಕುರಿತು ಬೆಂಬಲ ವ್ಯಕ್ತಪಡಿಸುತ್ತಿರುವುದು ಎಂಬಂತೆ ಬಿಂಬಿಸಲು ಯತ್ನಿಸಿದೆ ಎಂದು ಟ್ವಿಟರಿಗರು ಆರೋಪಿಸಿದ್ದಾರೆ. ಆಲ್ಟ್ ನ್ಯೂಸ್ ಸ್ಥಾಪಕ ಪ್ರತೀಕ್ ಸಿನ್ಹಾ ಅವರು ಈ ನಾಲ್ಕು ಫೋಟೋಗಳ ಹಿನ್ನೆಲೆ ಒಂದೇ ಆಗಿರುವುದನ್ನು ಬೆಟ್ಟು ಮಾಡಿದ್ದಾರೆ. ನಾಲ್ಕು ಮಂದಿಯೂ ಒಂದೇ ಮರದ ಸುತ್ತ ಕುಳಿತಿರುವುದು ಫೋಟೋಗಳಿಂದ ಸ್ಪಷ್ಟ ಎಂದು ಅವರು ಹೇಳಿದ್ದಾರೆ.

ಹಲವು ಟ್ವಿಟ್ಟರಿಗರು ತಮಗೆ ಈ ಫೋಟೋಗಳು 2006ರಲ್ಲಿ ತೆರೆ ಕಂಡ ದಿಬಕರ್ ಬ್ಯಾನರ್ಜಿ ಅವರ  ಹಾಸ್ಯ ಚಿತ್ರ `ಖೋಸ್ಲಾ ಕಾ ಘೋಸ್ಲಾ' ನೆನಪಿಗೆ ತಂದಿದೆ ಎಂದಿದ್ದಾರೆ. ಆ ಸಿನೆಮಾದಲ್ಲಿ  ಖುರಾನ(ಬೋಮನ್ ಇರಾನಿ) ಎಂಬ ದುರಾಸೆಯ ವ್ಯಕ್ತಿಯನ್ನು ಖೋಸ್ಲಾ (ರಣವೀರ್ ಶೋರೆ) ಮತ್ತಾತನ ಕುಟುಂಬವು ಮೀನುಗಾರಿಕಾ ಇಲಾಖೆಗೆ ಸೇರಿದ ಜಮೀನು ಖರೀದಿಸುವಂತೆ  ಮಾಡುವ ಘಟನಾವಳಿಗಳಿವೆ. ಖುರಾನನಿಂದ ಈ ಹಿಂದೆ ವಂಚನೆಗೊಳಗಾದ ಖೋಸ್ಲಾ ಕುಟುಂಬ ಈ ರೀತಿ ಸೇಡು ತೀರಿಸುತ್ತದೆ. ಖುರಾನ ತಾನು ಖರೀದಿಸಿರಲಿರುವ ಭೂಮಿಯ ಪರಿಶೀಲನೆಗೆ ಹೋದಾಗ ಖೋಸ್ಲಾನ ತಂದೆ (ಅನುಪಮ್ ಖೇರ್) ಮತ್ತಾತನ ಕೆಲ ನಾಟಕ ತಂಡದ ಸ್ನೇಹಿತರು ಕಾರ್ಮಿಕರಂತೆ  ಬಟ್ಟೆ ಧರಿಸಿ ಅಲ್ಲಿ ಇರುತ್ತಾರೆ.

ಎಎನ್‍ಐ ವರದಿಗೂ ಈ ಚಿತ್ರದ ದೃಶ್ಯಕ್ಕೂ ಸಾಮ್ಯತೆಯಿದೆ ಎಂದು ಹಲವು ಟ್ವಿಟ್ಟರಿಗರು ಸ್ವಾರಸ್ಯಕರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News