ಮಹಿಳೆಯ ಕೊಲೆ ಪ್ರಕರಣ: ಆರೋಪಿಗಳನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು

Update: 2020-09-22 12:06 GMT

ಬೆಂಗಳೂರು, ಸೆ.22: ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟು ಕಾಲುಗಳಿಗೆ ತಗಲಿ ಗಾಯಗೊಂಡಿರುವ ವೇಲು ಮತ್ತು ಬಾಲಕೃಷ್ಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾರದ ಹಿಂದೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ಮನೆಯಲ್ಲಿ ಶ್ವೇತಾ ಎಂಬುವರು ಒಂಟಿಯಾಗಿರುವುದನ್ನು ಗಮನಿಸಿ ಹೊಂಚು ಹಾಕಿ ನುಗ್ಗಿ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮಾಂಗಲ್ಯ ಸರ ಕಳ್ಳತನ ಮಾಡಿ ಪರಾರಿಯಾಗಿದ್ದರು. ಆರೋಪಿಗಳು ಆನೇಕಲ್ ತಾಲೂಕಿನ ಮುತ್ಯಾಲಮಡುವಿನ ಬಳಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಕೂಡಲೇ ಹೆಬ್ಬಗೋಡಿ ಇನ್‍ಸ್ಪೆಕ್ಟರ್ ಗೌತಮ್ ಮತ್ತು ಬನ್ನೇರುಘಟ್ಟ ಎಸ್ಸೈ ಗೋವಿಂದ್ ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಚೂಪಾದ ಕತ್ತಿಯಿಂದ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳತ್ತ ಮತ್ತೆರಡು ಸುತ್ತು ಗುಂಡು ಹಾರಿಸಿದ್ದು ಇಬ್ಬರ ಕಾಲುಗಳಿಗೆ ತಗಲಿ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವೇಲು ಮತ್ತು ಬಾಲಾಜಿ, ಬೆಂಗಳೂರು ಸುತ್ತಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣವರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News