ಕೃಷಿಕರ ಪರವಾಗಿ ಮೋದಿ ಸರಕಾರ ಮಂಡಿಸಿರುವ ಮಸೂದೆಗಳು ಐತಿಹಾಸಿಕ: ಸಚಿವ ಬಿ.ಸಿ.ಪಾಟೀಲ್

Update: 2020-09-22 12:15 GMT

ಬೆಂಗಳೂರು, ಸೆ.22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರವು ಕೃಷಿಕರ ಪರವಾಗಿ ಮಸೂದೆಗಳನ್ನು ಮಂಡಿಸಿರುವುದು ಐತಿಹಾಸಿಕ ಮತ್ತು ಅಭಿನಂದನೀಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಕರ ಪರವಾದ ಮಸೂದೆಗಳಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗಿದೆ ಎಂದರು.

ರೈತರ ಮನೆಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ. ಅಂದಮಾತ್ರಕ್ಕೆ ಎಪಿಎಂಸಿಯಲ್ಲಿ ಮಾರಾಟ ನಿಲ್ಲಿಸಿಲ್ಲ. ಎಪಿಎಂಸಿಗೆ ಗೊತ್ತಿಲ್ಲದೇ ಮಧ್ಯವರ್ತಿಗಳ ಹಾವಳಿಯಿಂದಾಗುವ ತೊಂದರೆ ತಪ್ಪಿದೆ ಎಂದ ಅವರು, ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಪಂಜಾಬ್‍ಗನುಗುಣವಾಗಿ ಅಕಾಲಿಕ ದಳ ತೆಗೆದುಕೊಂಡ ನಿರ್ಧಾರ ಅವರ ವೈಯಕ್ತಿಕವಾದದ್ದು ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಯಾವುದೇ ರೈತರು ಎಪಿಎಂಸಿ ಕಾಯ್ದೆಯನ್ನು ವಿರೋಧಿಸಿಲ್ಲ. ರೈತನ ಬೆಳೆ ಮಾರಾಟ ಅವನ ಹಕ್ಕು. ಮೊದಲಿದ್ದ ಮಾರಾಟದ ನಿಯಮವನ್ನು ಕೇಂದ್ರ ಸಡಿಲಿಸಿದೆ. ಎಪಿಎಂಸಿ ಸೆಸ್ ಕೂಡ ರೈತರಿಗಾಗಿ ಕಡಿಮೆ ಮಾಡಿದೆ ಎಂದರು.

ಈ ಕಾನೂನು ಬಂದ ಮೇಲೆ ಹೊಲದಲ್ಲಿಯೇ ಹೋಗಿ ಬೆಳೆ ಖರೀದಿಸಬಹುದು. ಈ ಕಾನೂನು ಆದ ಮೇಲೆ ಎಲ್ಲ ಎಪಿಎಂಸಿಗೆ ಭೇಟಿ ಕೊಟ್ಟಿದ್ದೇವೆ. ಯಾರೂ ವಿರೋಧಿಸುತ್ತಿಲ್ಲ. ವಿಪಕ್ಷಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿದೆ. ರೈತನಿಗೆ ಮುಕ್ತವಾದ ವಾತಾವರಣ ಈ ಕಾಯಿದೆಯಿಂದ ಸಿಕ್ಕಿ ‘ನನ್ನ ಬೆಳೆ ನನ್ನ ಹಕ್ಕು’ ಎನ್ನುವಂತಾಗಿದೆ ಎಂದು ಅವರು ಹೇಳಿದರು.

ಬಹುರಾಷ್ಟ್ರೀಯ ಕಂಪೆನಿಗಳಿಗಾಗಲಿ, ಯಾರಿಗಾಗಲಿ ಮಾರಾಟ ಮಾಡಲಿ, ರೈತನ ಬೆಳೆಗೆ ಬೆಲೆ ಸಿಗಬೇಕು. ಆದಾಯ ಹೆಚ್ಚಾಗಬೇಕು. ಪ್ರತಿಭಟನೆ ಹತ್ತಿಕ್ಕುವ ಕೆಲಸ ನಮ್ಮ ಸರಕಾರ ಮಾಡುತ್ತಿಲ್ಲ. ತಿದ್ದುಪಡಿ ತಂದಾಗಲೇ ವಿರೋಧಿಸಿಲ್ಲ ಏಕೆ? 24x7 ಸರಕಾರವಿದೆ. ಪ್ರತಿಭಟನಾನಿರತರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ಧರಿದ್ದಾರೆ ಎಂದು ಸೋಮಶೇಖರ್ ತಿಳಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರೈತರಿಗೆ ಎಪಿಎಂಸಿಗೆ ಹೋಗಿ ಮಾರಾಟ ಮಾಡುವ ಸೀಮಿತ ಕಾಲಾವಧಿಯನ್ನು ವಿಸ್ತರಿಸಿ ಮಾರಾಟದ ಅವಕಾಶವನ್ನು ವಿಸ್ತರಿಸಲಾಗಿದೆ. ಲೋಡಿಂಗ್ ಅನ್ಲೋಡಿಂಗ್, ಹಮಾಲಿ ಕೂಲಿ ಖರ್ಚು ಕಡಿಮೆಯಾಗಲಿದೆ. ಇಂತಹ ರೈತ ಪರ ಕಾಯಿದೆ ತಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಸ್ವಾಮಿನಾಥನ್ ವರದಿ ತಂದಿದ್ದು ಮೋದಿ ಸರಕಾರ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿಯೂ ರಾಗಿ ಖರೀದಿಯಾಗುತ್ತಿದೆ. ಈ ಕಾಯಿದೆಯಿಂದ ಮಧ್ಯವರ್ತಿಗಳಿಗಷ್ಟೇ ತೊಂದರೆ. ದಳ್ಳಾಳಿಗಳೊಂದಿಗೆ ಸಹಕರಿಸುತ್ತಿರುವವರಿಗೆ ತೊಂದರೆ. ಈ ಪ್ರತಿಭಟನೆ ರೈತರದ್ದಲ್ಲ. ರೈತ ಹೋರಾಟಗಾರರದ್ದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News