ಅತಿಥಿ ಉಪನ್ಯಾಸಕರ ಗೌರವಧನ ಶೀಘ್ರ ಬಿಡುಗಡೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-09-22 13:05 GMT

ಬೆಂಗಳೂರು, ಸೆ.22: ಕಳೆದ ಐದು ತಿಂಗಳಿನಿಂದ ಬಾಕಿಯಿರುವ ಸರಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ಶೂನ್ಯವೇಳೆಯಲ್ಲಿ ಉಪನ್ಯಾಸಕರಿಗೆ ಗೌರವಧನ ನೀಡದ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಆಯನೂರು ಮಂಜುನಾಥ್ ಸರಕಾರ ಕೂಡಲೇ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿ ಭಾವಿಗಿಳಿದು ಪ್ರತಿಭಟಿಸಿದರು. ಇದಕ್ಕೆ ವಿಪಕ್ಷದ ಸದಸ್ಯರು ಬೆಂಬಲಿಸಿ ಬಾವಿಗಿಳಿದ ಹಿನ್ನೆಲೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಈ ವೇಳೆ ಸಭಾಧ್ಯಕ್ಷ ಪ್ರತಾಪ ಚಂದ್ರ ಶೆಟ್ಟಿ ಸದನವನ್ನು ಅರ್ಧಗಂಟೆ ಮುಂದೂಡಿದರು.

ಸದನ ಮರು ಆರಂಭವಾದ ಬಳಿಕ ಉತ್ತರಿಸಿದ ಮುಖ್ಯಮಂತ್ರಿ, ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡುವುದು ಸರಕಾರದ ಕರ್ತವ್ಯ. ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿ ಆತಂಕ ಬೇಡ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಆಯನೂರು ಮಂಜುನಾಥ್, ರಾಜ್ಯದಲ್ಲಿರುವ 500 ಕ್ಕೂ ಅಧಿಕ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಿದ್ದಾರೆ. ಇವರನ್ನು ಆಯಾ ಶೈಕ್ಷಣಿಕ ಸಾಲಿನಲ್ಲಿ ಹತ್ತು ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಇವರ ಸೇವೆಯನ್ನು ಬಳಸಿಕೊಳ್ಳುತ್ತಿದೆ. ಆದರೆ, ಇವರಿಗೆ ವೇತನ ನೀಡಿಲ್ಲ. ಹೀಗಾಗಿ, ಇವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.

ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಈ ಅತಿಥಿ ಉಪನ್ಯಾಸಕರನ್ನು ಕೊರೋನ ಅವಧಿಯಲ್ಲಿ ಶಾಲಾ-ಕಾಲೇಜು ರಜೆ ಇದ್ದರೂ `ಕರ್ತವ್ಯದಲ್ಲಿ ಇದ್ದಾರೆ' ಎಂದು ಪರಿಗಣಿಸಿ, ವೇತನ ನೀಡಲು ಸೂಚಿಸಿದೆ. ಆದರೆ, ರಾಜ್ಯ ಸರಕಾರ ಐದು ತಿಂಗಳ ವೇತನ ಪಾವತಿಸದೆ ದುಡಿಸಿಕೊಳ್ಳುತ್ತಿದೆ. ಅಲ್ಲದೆ, ಯಾವುದೇ ವಿವಿಗಳು ಇವರನ್ನು ಬಿಡುಗಡೆ ಮಾಡಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಆದುದರಿಂದ ಇವರ ಸೇವೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿದ್ದಕ್ಕೆ ಅಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಪರಿಗಣಿಸಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಂಜುನಾಥ್‍ರ ಪ್ರಶ್ನೆಗೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, `ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸಲಾಗುವುದು' ಎಂದು ತಿಳಿಸಿದರು. ಇದಕ್ಕೆ ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಬಾವಿಗಿಳಿದ ಆಡಳಿತ ಪಕ್ಷದ ಸದಸ್ಯ: ‘ಸರಕಾರದ ಸ್ಪಷ್ಟ ಭರವಸೆ ಬರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಕಲಾಪದ ಬಾವಿಗಿಳಿದು ಪ್ರತಿಭಟಿಸಿದರು. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಾವಿಗಿಳಿದು ಬೆಂಬಲ ಸೂಚಿಸಿದರು. ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಕೆಲ ಸದಸ್ಯರು ತಮ್ಮ ಸ್ಥಾನದಿಂದಲೇ ಆಯನೂರು ಮಂಜುನಾಥ್‍ಗೆ ದನಿಗೂಡಿಸಿದರು. ನಂತರ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲ್ಮನೆಗೆ ಆಗಮಿಸಿ, ವೇತನ ಬಿಡುಗಡೆಯ ಭರವಸೆ ನೀಡುವ ಮೂಲಕ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News