ಸಚಿವರು-ಶಾಸಕರ ವೇತನ, ಭತ್ತೆ ಕಡಿತ ವಿಧೇಯಕ ವಿಧಾನಸಭೆಯಲ್ಲಿ ಮಂಡನೆ

Update: 2020-09-22 13:09 GMT

ಬೆಂಗಳೂರು, ಸೆ. 22: ಕೋವಿಡ್-19 ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಅನುವಾಗುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮಂತ್ರಿ, ಸಚಿವರು, ಸಭಾಪತಿ, ಸ್ಪೀಕರ್, ವಿಪಕ್ಷ ನಾಯಕರು ಹಾಗೂ ಶಾಸಕರ ಸಂಬಳ ಮತ್ತು ಭತ್ತೆಗಳನ್ನು ಕಡಿತ ಮಾಡುವ `ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ತೆಗಳ ತಿದ್ದುಪಡಿ ವಿಧೇಯಕ'ವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.

ಮಂಗಳವಾರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ವಿಧೇಯಕವನ್ನು ಮಂಡಿಸಿ ಕೊರೋನ ಸೋಂಕಿನ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಶಾಸಕರು ಹಾಗೂ ಮೇಲ್ಮನೆ ಸದಸ್ಯರ ಸಂಬಳಗಳು ಮತ್ತು ಭತ್ತೆಗಳನ್ನು ಕಡಿತಗೊಳಿಸಲು ಈ ವಿಧೇಯಕವನ್ನು ಮಂಡಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಧೇಯಕದ ಪ್ರಕಾರ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರ ಎಲ್ಲರ ಸಂಬಳ ಹಾಗೂ ಭತ್ತೆಗಳು ಶೇ.30ರಷ್ಟು ಕಡಿತಗೊಳ್ಳಲಿವೆ. ಕೋವಿಡ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಕೆಲವು ತುರ್ತು ಕ್ರಮಗಳ ಅಗತ್ಯವಿದೆ. ಅದರಂತೆ ಸಂಪನ್ಮೂಲ ಕ್ರೋಡೀಕರಿಸಲು ಭತ್ತೆ ಕಡಿತಕ್ಕೆ ಅವಕಾಶ ಕೊಡುವ ಈ ವಿಧೇಯಕವನ್ನು ಮಂಡಿಸಲಾಗಿದೆ ಎಂದು ಅವರು ವಿವರಿಸಿದರು.

2020ನೆ ಎಪ್ರಿಲ್ 1ರಿಂದ ಆರಂಭವಾಗಿ ಒಂದು ವರ್ಷದ ಅವಧಿಗೆ ವೇತನ ಮತ್ತು ಭತ್ತೆ ಕಡಿತಗೊಳಿಸಲು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದ್ದು, ಈ ವಿಧೇಯಕ ಅಂಗೀಕಾರವಾದರೆ ಮುಖ್ಯಮಂತ್ರಿ, ಸಚಿವರು, ಸಭಾಪತಿ, ಉಪಸಭಾಪತಿ, ಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿಪಕ್ಷ ನಾಯಕ, ಸರಕಾರದ ಮುಖ್ಯ ಸಚೇತಕ, ವಿಪಕ್ಷದ ಮುಖ್ಯ ಸಚೇತಕ, ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಎಲ್ಲ ಸದಸ್ಯರ ವೇತನ ಮತ್ತು ಭತ್ತೆಯಲ್ಲಿ ಶೇ.30ರಷ್ಟು ಕಡಿತವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News