ವಿಧಾನಸಭೆ ಕಲಾಪ: ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸ್ಪೀಕರ್ ಕಾಗೇರಿ

Update: 2020-09-22 13:28 GMT

ಬೆಂಗಳೂರು, ಸೆ. 22: ಕೊರೋನ ಸೋಂಕಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದೇ ಸವಾಲಾಗಿದೆ, ಹೀಗಾಗಿ ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿ ಅರಿತು ಶಿಸ್ತು ಬದ್ಧವಾಗಿ ಸದನ ನಡೆಸಲು ಸಹಕರಿಸಬೇಕು. ಕೆಲವರು ಸದನದ ಒಳಗೆ ಬಂದಾಗ ಮಾಸ್ಕ್ ತೆಗೆದು ಕುಳಿತಿರುವುದನ್ನು ಗಮನಿಸಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಸ್ಪೀಕರ್ ಕಾಗೇರಿ, ಎಲ್ಲ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಈ ಬಗ್ಗೆ ಮಾತನಾಡಿದ ಅವರು, ಸದನದಲ್ಲಿ ಮಾತನಾಡುವಾಗ ಮಾಸ್ಕ್ ಹಾಕಿಕೊಂಡೆ ಮಾತನಾಡಬೇಕು. ಫೇಸ್‍ಶೀಲ್ಡ್ ಧರಿಸಿರಬೇಕು. ನೆಗೆಟಿವ್ ಬಂದಿರುವವರಿಗೆ ಟ್ಯಾಗ್ ನೀಡಲಾಗುತ್ತದೆ. ಎಲ್ಲರೂ ಕಡ್ಡಾಯವಾಗಿ ಧರಿಸಿರಬೇಕು. ಯಾವುದೇ ಸದಸ್ಯರಿಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಿರ್ಲಕ್ಷ್ಯ ಮಾಡದೇ ತಪಾಸಣೆಗೊಳಗಾಗಬೇಕು ಎಂದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲ ಸದಸ್ಯರ ಜವಾಬ್ದಾರಿ. ಹಲವು ವಿಧೇಯಕಗಳು ಮಂಡನೆಯಾಗಿದ್ದು, ಸದಸ್ಯರಿಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕಾಗೇರಿ ಇದೇ ವೇಳೆ ಭರವಸೆ ನೀಡಿದರು.

ಕಲಾಪಕ್ಕೆ ಸಹಕರಿಸಿ: ವಿಧಾನ ಮಂಡಲ ಅಧಿವೇಶನ ಸೆ.26ರ ವರೆಗೆ ಮಾತ್ರ ನಡೆಯಲಿದ್ದು, ಎಲ್ಲ ಸದಸ್ಯರು ಸಮಯದ ಮಿತಿ ಅರಿತು ಕಾರ್ಯಕಲಾಪಕ್ಕೆ ಅಗತ್ಯ ಸಹಕಾರ ನೀಡಬೇಕೆಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಇಂದಿಲ್ಲಿ ಮನವಿ ಮಾಡಿದರು.

ನಿನ್ನೆ ನಡೆದ ಸದನ ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಿಗದಿಯಾಗಿದ್ದ ಅಧಿವೇಶನದಲ್ಲೇ ಎರಡು ದಿನ ಕಡಿತ ಮಾಡಲಾಗಿದೆ. ಹೀಗಾಗಿ ಸೆ.26ಕ್ಕೆ ಅಧಿವೇಶನ ಮುಕ್ತಾಯವಾಗಲಿದೆ. ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರ ವರೆಗೆ ಸದನ ನಡೆಸಲು ಸಭೆಯಲ್ಲಿ ನಿರ್ಣಯವಾಗಿದೆ ಎಂದು ಹೇಳಿದರು.

ಚುಕ್ಕೆ ರಹಿತ ಪ್ರಶ್ನೋತ್ತರವನ್ನು ಸದಸ್ಯರಿಗೆ ಇ-ಮೇಲ್ ಮೂಲಕ ಕಳುಹಿಸಿಕೊಡಲಾಗುವುದು. ಸದನದಲ್ಲಿ ಉತ್ತರಿಸುವ ಪ್ರಶ್ನೆಗಳ ಉತ್ತರವನ್ನು ಸದನದಲ್ಲೇ ಮಂಡನೆ ಮಾಡಲಾಗುವುದು. ಆದ್ಯತೆ ಮೇಲೆ ವಿಧೇಯಕಗಳ ಚರ್ಚೆಗೆ ಅವಕಾಶ ಮಾಡಿ ಕೊಡಲಾಗುವುದು. ಆರು ತಿಂಗಳ ನಂತರ ಸದನ ಸೇರುತ್ತಿದ್ದು, ಅವಧಿ ಕಡಿಮೆ ಇದೆ, ಸದಸ್ಯರು ಸಹಕರಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News