ಮಧ್ಯರಾತ್ರಿ ಯುವತಿ ಮನೆಗೆ ನುಗ್ಗಲು ಯತ್ನಿಸಿದ ಆರೋಪ : ಯುವಕನ ಥಳಿಸಿ ಕೊಲೆ

Update: 2020-09-23 03:31 GMT

ಮಥುರಾ : ಮಧ್ಯರಾತ್ರಿ ವೇಳೆ ಯುವತಿಯೊಬ್ಬಳ ಮನೆಗೆ ನುಗ್ಗಲು ಯತ್ನಿಸಿದ ಆರೋಪದಲ್ಲಿ ಯುವಕನನ್ನು ಯುವತಿಯ ಸಂಬಂಧಿಕರು ಮತ್ತು ನೆರೆಯವರು ಹೊಡೆದು ಸಾಯಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಸಂಭವಿಸಿದ್ದು, ಘಟನೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಎರಡು ಗ್ರಾಮಗಳು ಉದ್ವಿಗ್ನವಾಗಿವೆ.

ಹದಿನೇಳು ವರ್ಷದ ಯುವಕ ಘಟನೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಯುವಕ ತೀವ್ರ ಗಾಯಗೊಂಡಿದ್ದಾನೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಗ್ರಾಮಗಳಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಯುವಕ ಹಾಗೂ ಯುವತಿ ಅಕ್ಕಪಕ್ಕದ ಗ್ರಾಮದವರಾಗಿದ್ದು, ಸ್ಥಳೀಯ ಪ್ರಬಲ ಸಮುದಾಯಗಳಿಗೆ ಸೇರಿರುವ ಹಿನ್ನೆಲೆಯಲ್ಲಿ ಉಭಯ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ಇದೆ.

ಯುವಕ ಹಾಗೂ ಯುವತಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎನ್ನಲಾಗಿದ್ದು, ಇವರ ಸ್ನೇಹಕ್ಕೆ ಯುವತಿ ಕುಟುಂಬದವರ ಒಪ್ಪಿಗೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿ ಮಾಡಲು ಯುವಕ ಹಾಗೂ ಆತನ ಸ್ನೇಹಿತ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಯುವಕನ ಕುಟುಂಬದವರು ದೂರಿನಲ್ಲಿ ವಿವರಿಸಿದ್ದಾರೆ.

ಯುವಕ ಹಾಗೂ ಆತನ ಸ್ನೇಹಿತ ಹಿಂಬದಿ ಗೋಡೆ ಏರಿ ಅಕ್ರಮವಾಗಿ ಮನೆಗೆ ಪ್ರವೇಶಿಸಲು ಯತ್ನಿಸಿದ್ದರು ಎನ್ನುವುದು ಯುವತಿಯ ಮನೆಯವರ ಆರೋಪ. ಯುವಕರಿಬ್ಬರು ಮನೆಗೆ ಹೋಗಿದ್ದರೇ ಅಥವಾ ಮಾರ್ಗಮಧ್ಯದಲ್ಲಿ ಅವರನ್ನು ಹಿಡಿಯಲಾಗಿತ್ತೇ ಎನ್ನುವುದು ಗೊತ್ತಿಲ್ಲ ಎಂದು ಯುವಕನ ತಂದೆ ಹೇಳಿದ್ದಾರೆ.

ಯುವತಿಯ ಕುಟುಂಬದವರ ಪ್ರಕಾರ, ಇಬ್ಬರು ಯುವಕರು ಕಾಂಪೌಂಡ್‌ನೊಳಕ್ಕೆ ಬಂದಾಗ ಜಗುಲಿಯಲ್ಲಿ ಮಲಗಿದ್ದ ಅಜ್ಜ ಎಚ್ಚರಗೊಂಡು ಕೂಗಿಕೊಂಡರು. ಸಂಬಂಧಿಕರು ಹಾಗೂ ನೆರೆಯವರು ಜಮಾಯಿಸಿ ಇಬ್ಬರನ್ನೂ ಥಳಿಸಿದರು. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯದಲ್ಲೇ ಯುವಕ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News