ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ: 7 ಮಸೂದೆಗೆ ಆಂಗೀಕಾರ

Update: 2020-09-23 04:24 GMT

ಹೊಸದಿಲ್ಲಿ : ಏಳು ಮಂದಿ ಸಂಸದರ ಅಮಾನತು ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳು ರಾಜ್ಯಸಭೆ ಕಲಾಪ ಬಹಿಷ್ಕರಿಸಿದ್ದು, ವಿರೋಧ ಪಕ್ಷಗಳ ಸದಸ್ಯರ ಅನುಪಸ್ಥಿತಿಯಲ್ಲಿ ಏಳು ಮಸೂದೆಗಳಿಗೆ ಮೇಲ್ಮನೆಯ ಅನುಮೋದನೆ ಪಡೆಯಲು ಸರ್ಕಾರಕ್ಕೆ ಸುಗಮವಾಯಿತು. ಮೂರೂವರೆ ಗಂಟೆ ಅವಧಿಯಲ್ಲಿ ಏಳು ಮಸೂದೆಗಳನ್ನು ಸದನ ಆಂಗೀಕರಿಸಿತು.

ಚರ್ಚೆ ಹಾಗೂ ಸಚಿವರ ಉತ್ತರದ ಬಳಿಕ ಏಳು ಮಸೂದೆಗಳನ್ನು ಧ್ವನಿಮತದಿಂದ ಆಂಗೀಕರಿಸಲಾಯಿತು. ಕೆಲವೇ ನಿಮಿಷಗಳ ಅವಧಿಯಲ್ಲಿ ಪ್ರತಿ ಮಸೂದೆಯ ಅನುಮೋದನೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಕಾನೂನುಗಳ (ತಿದ್ದುಪಡಿ) ಮಸೂದೆಯೂ ಸೇರಿದೆ.

ಆರು ಮಸೂದೆಗಳು ಲೋಕಸಭೆಯಲ್ಲಿ ಆಂಗೀಕಾರವಾಗಿದ್ದು, ರಾಷ್ಟ್ರಪತಿಗಳ ಅಂಕಿತದ ಬಳಿಕ ಅದು ಕಾಯ್ದೆಯಾಗಲಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬದ್ಧತೆ ಅಗತ್ಯತೆಯನ್ನು ಸಡಿಲಿಸುವ ಕುರಿತ ಮಸೂದೆಯನ್ನು ಲೋಕಸಭೆಗೆ ಕಳುಹಿಸಲಾಯಿತು.

ಆಡಳಿತ ಪಕ್ಷದ ಸದಸ್ಯರನ್ನು ಹೊರತುಪಡಿಸಿ ಬಿಜೆಡಿ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರು ಮಾತ್ರ ಮಸೂದೆ ಆಂಗೀಕಾರದ ವೇಳೆ ಸದನದಲ್ಲಿ ಹಾಜರಿದ್ದರು. ಮಾತನಾಡುವ ಸದಸ್ಯರ ಹೆಸರನ್ನು ಸಭಾಧ್ಯಕ್ಷರು ಪದೇ ಪದೇ ಕರೆದರೂ ಯಾರೂ ಹಾಜರಿರಲಿಲ್ಲ. ಇದರಿಂದಾಗಿ ಬಿಜೆಪಿಯೇತರ ಪಕ್ಷಗಳ ಸಂಸದರಿಗೆ ಮಸೂದೆ ಬಗ್ಗೆ ಚರ್ಚಿಸಲು ಸಾಕಷ್ಟು ಸಮಯಾವಕಾಶ ದೊರಕಿತು.

ಎರಡು ನಿರ್ಣಯಗಳು ಸಿಪಿಐ ಸಂಸದ ವಿನಯ್ ವಿಶ್ವಮ್ ಹಾಗೂ ಕಾಂಗ್ರೆಸ್‌ನ ಕೆ.ವೇಣುಗೋಪಾಲ್ ಹಾಗೂ ದಿಗ್ವಿಜಯ ಸಿಂಗ್ ಅವರ ಹೆಸರಿನಲ್ಲಿ ಪಟ್ಟಿಯಾಗಿದ್ದವು. ಬ್ಯಾಂಕಿಂಗ್ ನಿಬಂಧನೆಗಳ ಸುಗ್ರೀವಾಜ್ಞೆ ಮತ್ತು ತೆರಿಗೆ ಮತ್ತು ಇತರ ಕಾನೂನುಗಳ ಸಡಿಲಿಕೆ ಕುರಿತ ಸುಗ್ರೀವಾಜ್ಞೆಗಳನ್ನು ತಿರಸ್ಕರಿಸುವ ನಿರ್ಣಯಗಳು ಸದಸ್ಯರ ಅನುಪಸ್ಥಿತಿಯಿಂದಾಗಿ ಮಂಡನೆಯಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News