ಡ್ರಗ್ಸ್ ಜಾಲ ಆರೋಪ: ಎರಡನೆ ಬಾರಿ ವಿಚಾರಣೆಗೆ ಹಾಜರಾದ ನಟ ದಿಗಂತ್

Update: 2020-09-23 12:37 GMT

ಬೆಂಗಳೂರು, ಸೆ.23: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ ಆರೋಪಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಸಿಸಿಬಿ ಅಧಿಕಾರಿಗಳ ಮುಂದೆ ಎರಡನೆ ಬಾರಿ ವಿಚಾರಣೆಗೆ ಹಾಜರಾದರು.

ಬೆಂಗಳೂರಿನ ಎಚ್‍ಎಂಟಿ ಬಳಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದು, ದಿಗಂತ್ ಅವರು ಅಲ್ಲಿಂದಲೇ ನೇರವಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದರು. ಸಿಸಿಬಿ ಪೊಲೀಸರು ಎರಡನೆ ಸುತ್ತಿನ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದರು. ಎರಡನೆ ಬಾರಿ ನೋಟಿಸ್ ನೀಡಿದ್ದರಿಂದ ದಿಗಂತ್ ವಿಚಾರಣೆಗೆ ಹಾಜರಾಗಿದ್ದರು.

ಮೊದಲ ಸುತ್ತಿನ ವಿಚಾರಣೆಗೆ ಹಾಜರಾದಾಗ ದಿಗಂತ್ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಅದನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದರು. ಅದರಲ್ಲಿ ಸಿಕ್ಕ ಮಾಹಿತಿ ಹಾಗೂ ಮೊದಲ ಬಾರಿಗೆ ಹಾಜರಾಗಿದ್ದ ವೇಳೆ ನೀಡಿದ್ದ ಹೇಳಿಕೆಗಳ ಬಗ್ಗೆ ಮತ್ತೊಮ್ಮೆ ತನಿಖಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಗೋವಾ, ಮುಂಬೈ, ಶ್ರೀಲಂಕಾ ಮತ್ತು ಬೆಂಗಳೂರು ಸೇರಿ ಇನ್ನಿತರ ಕಡೆ ಆಯೋಜಿಸಿದ್ದ ಪಾರ್ಟಿಗಳಿಗೆ ಹೋಗಿರುವುದರ ಬಗ್ಗೆ ಮತ್ತು ಬಂಧಿತರಾಗಿರುವ ಡ್ರಗ್ಸ್ ಪೆಡ್ಲರ್ ಗಳು ವಿಚಾರಣೆ ವೇಳೆಯಲ್ಲಿ ನೀಡಿರುವ ಹೇಳಿಕೆಗಳು ದಿಗಂತ್‍ಗೆ ಸಮಸ್ಯೆಯಾಗುವ ಸಾಧ್ಯತೆಗಳಿವೆ.

ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ

‘ಸಿಸಿಬಿ ತನಿಖಾಧಿಕಾರಿಗಳಿಗೆ ನನ್ನ ಬಳಿಯಿದ್ದ ಅಗತ್ಯ ಮಾಹಿತಿ ನೀಡಿರುವೆ. ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇನೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ.’

-ದಿಗಂತ್, ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News