ವಕ್ಫ್ ಆಸ್ತಿ ಕಬಳಿಕೆ ಆರೋಪ: ಅನ್ವರ್ ಮಾಣಿಪ್ಪಾಡಿ ವರದಿ ವಿಧಾನಸಭೆಯಲ್ಲಿ ಮಂಡಿಸಿದ ಸರಕಾರ

Update: 2020-09-23 15:02 GMT

ಬೆಂಗಳೂರು, ಸೆ.23: ರಾಜ್ಯ ವಕ್ಫ್ ಮಂಡಳಿಯ ಎಲ್ಲ ದುರ್ನಡತೆಗಳು ಮತ್ತು ವಂಚನೆಯ ಕಾರ್ಯಗಳನ್ನು ಕೂಲಂಕಷವಾಗಿ ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿಕೊಡುವುದು ಸೇರಿದಂತೆ ಇನ್ನಿತರ ಶಿಫಾರಸ್ಸುಗಳನ್ನು ಒಳಗೊಂಡ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ವೇಳೆ ಅನ್ವರ್ ಮಾಣಿಪ್ಪಾಡಿ 2012ರ ಮಾ.23ರಂದು ಸಲ್ಲಿಸಿದ್ದ ವಿಶೇಷ ವರದಿಯನ್ನು ರಾಜ್ಯ ಸರಕಾರ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿತು.

ವಕ್ಫ್ ಮಂಡಳಿಯ ಕೆಲಸ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಇಬ್ಬರು ನಿವೃತ್ತ ಆರೋಗ್ಯವಂತ ಐಎಎಸ್ ಅಧಿಕಾರಿಗಳು, ಒಬ್ಬ ನಿವೃತ್ತ ನ್ಯಾಯಾಧೀಶ, ವಕ್ಫ್ ಆಸ್ತಿಯ ಮರುಗಳಿಕೆಗಾಗಿ ಹೋರಾಟ ನಡೆಸಿದ್ದ ಎರಡು ಸರಕಾರೇತರ ಸಂಸ್ಥೆಗಳು, ರಾಜ್ಯ ಅಲ್ಪಸಂಖ್ಯಾತರ ಆಯೋಗದಿಂದ ಮೂರು ವ್ಯಕ್ತಿಗಳನ್ನು ಒಳಗೊಂಡ ಉನ್ನತ ಅಧಿಕಾರದ ಸಮಿತಿಯನ್ನು ರಚಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ವಕ್ಫ್ ಕಾನೂನು 1995ರ ಅನ್ವಯ ರಾಜ್ಯ ವಕ್ಫ್ ಮಂಡಳಿಯ ಅಧೀನದಲ್ಲಿರುವ ಎಲ್ಲ ವಕ್ಫ್ ಸಂಸ್ಥೆಗಳು ಹೊಂದಿರುವ ಎಲ್ಲ ಆಸ್ತಿಗಳ ‘ಭೂಮಿ ಲೆಕ್ಕ ಪರಿಶೋಧನೆ’ಯನ್ನು ಕೈಗೆತ್ತಿಕೊಳ್ಳಬೇಕು. ಒಬ್ಬ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಎಲ್ಲ ಉಪ ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರರು ಮತ್ತು ಸರ್ವೇಯರ್ ಗಳನ್ನು ಒಳಗೊಂಡ ಒಂದು ‘ವಿಶೇಷ ಉದ್ದೇಶದ ಪಡೆ’ಯನ್ನು ನಿರ್ಮಿಸಿ ಆರು ತಿಂಗಳಲ್ಲಿ ಎಲ್ಲ ವಕ್ಫ್ ಆಸ್ತಿಗಳ ಎರಡನೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ವಕ್ಫ್ ಆಸ್ತಿಗಳ ಕಾರ್ಯಪಡೆಗೆ ಮುಖ್ಯಸ್ಥರನ್ನಾಗಿ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಆಯೋಗವು ವರದಿಯಲ್ಲಿ ಸಲಹೆ ನೀಡಿದೆ.

ವಕ್ಫ್ ಆಸ್ತಿಗಳನ್ನು ದುರುಪಯೋಗಪಡಿಸಿಕೊಂಡಿರುವ, ಅತಿಕ್ರಮಿಸಿರುವ, ಕಾನೂನು ಬಾಹಿರವಾಗಿ ಅನುಭೋಗದ ಹಕ್ಕು ಪಡೆದಿರುವ ವ್ಯಕ್ತಿಗಳನ್ನು ಎಲ್ಲ ಚುನಾವಣೆಗಳು, ನೇಮಕಾತಿಗಳಿಗೆ ಸ್ಪರ್ಧಿಸುವುದರಿಂದ ನಿಷೇಧಿಸಲು ಸಾಧ್ಯವಾಗುವಂತೆ ವಕ್ಫ್ ಕಾನೂನು 1995 ಅನ್ನು ತಿದ್ದುಪಡಿ ಮಾಡಲು ಭಾರತ ಸರಕಾರವನ್ನು ವಿನಂತಿಸಬೇಕು.

ಭೂ ಕಬಳಿಕೆಯ ಅಪರಾಧಗಳು ಅಥವಾ ವಕ್ಫ್ ಆಸ್ತಿಗಳ ಯಾವುದೆ ವಂಚನೆಯ ಕಾರ್ಯಗಳಲ್ಲಿ ಭಾಗವಹಿಸಿ ತಪ್ಪಿತಸ್ಥರೆಂದು ಸಾಬೀತಾಗಿದ್ದಲ್ಲಿ, ಎಲ್ಲ ವಕ್ಫ್ ಅಧಿಕಾರಿಗಳು, ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ನಾಯಕರು ಮತ್ತು ಸಮಾಜ ಸುಧಾರಕರ ಸೋಗು ಹಾಕುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಬೇಕು.

ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳ ಮೇಲೆ ಸರಕಾರಿ ಏಜೆನ್ಸಿಗಳು ಅತಿಕ್ರಮಣ ನಡೆಸಿದ ಪ್ರಕರಣವನ್ನೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಗುರುತಿಸಬೇಕು ಮತ್ತು ಈ ಆಸ್ತಿಗಳಿಂದ ಅವಶ್ಯಕ ಬಾಡಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸಬೇಕು ಮತ್ತು ಆ ಬಾಡಿಗೆಯನ್ನು ಮುಸ್ಲಿಮ್ ಸಮುದಾಯದ ಉನ್ನತಿಗಾಗಿ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಬಗ್ಗೆ ಈ ಬಾಡಿಗೆಗಳ ಉಪಯೋಗಕ್ಕಾಗಿ ಸರಿಯಾದ ಮಾರ್ಗಸೂಚಿಗಳೊಡನೆ ಸಂಬಂಧಿತ ವಕ್ಫ್ ಸಂಸ್ಥೆಗೆ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News