ವಿಧಾನ ಮಂಡಲ ಉಭಯ ಸದನಗಳಲ್ಲಿ ಸುರೇಶ್ ಅಂಗಡಿಗೆ ಶ್ರದ್ಧಾಂಜಲಿ

Update: 2020-09-24 12:12 GMT

ಬೆಂಗಳೂರು, ಸೆ.24: ನಿನ್ನೆ ಹೊಸದಿಲ್ಲಿಯಲ್ಲಿ ನಿಧನರಾದ ಕೇಂದ್ರದ ಹಾಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಚನ್ನಬಸಪ್ಪ ಅಂಗಡಿ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗುರುವಾರ ಬೆಳಗ್ಗೆ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕ್ರಮವಾಗಿ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹಾಗೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹಗಡೆ ಕಾಗೇರಿ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ ನಿನ್ನೆ ಸುರೇಶ್ ಅಂಗಡಿ ಅವರು ನಿಧನರಾಗಿದ್ದಾರೆ ಎಂದು ಅತ್ಯಂತ ವಿಷಾದದಿಂದ ಸದನಕ್ಕೆ ತಿಳಿಸಿದರು.

1955ರ ಜೂ.1ರಂದು ಬೆಳಗಾವಿ ಜಿಲ್ಲೆಯ ಕೆ.ಕೊಪ್ಪ ಗ್ರಾಮದಲ್ಲಿ ಜನಿಸಿದ್ದ ಅಂಗಡಿ ಅವರು, ಬಿಕಾಂ ಮತ್ತು ಎಲ್‍ಎಲ್‍ಬಿ ಪದವೀಧರರಾಗಿದ್ದರು. ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಸಾಮಾಜಿಕ ಸೇವೆಗಳಲ್ಲಿ ಆಸಕ್ತಿ ಹೊಂದಿದ್ದರು. 2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ನಂತರ 2009 ಮತ್ತು 2014 ಹಾಗೂ 2019ರಲ್ಲಿ ಸತತವಾಗಿ ನಾಲ್ಕನೇ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು.

ಸಂಸತ್‍ನ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು, 2019ರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು, ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗಕ್ಕೆ ಅನುಮೋದನೆ ಸೇರಿದಂತೆ ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ರೈಲ್ವೆ ಯೋಜನೆಗಳಿಗೆ ಜೀವ ತುಂಬುವ ಗುರಿ ಹೊಂದಿದ್ದರು. ಬಡಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಹೊಂದಿದ್ದ ಅಂಗಡಿ, ನರ್ಸರಿಯಿಂದ ಇಂಜಿನಿಯರ್ ವರೆಗೂ ಅತ್ಯಾಧುನಿಕ ಅನುಕೂಲವಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. `ಜನರಿಂದಲೇ ಬಂದಿದ್ದೇನೆ. ಯಾವಾಗಲೂ ಜನರಿಗಾಗಿಯೇ ದುಡಿಯುತ್ತೇನೆ' ಎಂಬುದು ಅವರ ಧ್ಯೇಯವಾಗಿತ್ತು ಎಂದು ಸ್ಪೀಕರ್ ಸ್ಮರಿಸಿದರು.

ಅಜಾತಶತ್ರು: `ಸುರೇಶ್ ಅಂಗಡಿ ಅವರ ನಿಧನ ಅತ್ಯಂತ ಆಘಾತ ತಂದಿದೆ. ಅತ್ಯಂತ ಜನಪ್ರಿಯ ನಾಯಕರಾಗಿದ್ದ ಅವರು, ರಾಜ್ಯದಲ್ಲಿ ರೈಲ್ವೆ ಸಚಿವರಾಗಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಮತ್ತು ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದರು. ಕೋವಿಡ್ ಸೋಂಕುನಿಂದ ಅವರು ಹೊರ ಬರುವ ವಿಶ್ವಾಸವಿತ್ತು. ಆದರೆ, ಈ ಮಾರಕ ಸೋಂಕು ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಅಂಗಡಿ ಉದಾಹರಣೆ. ಅವರು ಒಂದು ರೀತಿಯಲ್ಲಿ ಅಜಾತ ಶತ್ರು ಆಗಿದ್ದರು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದರು.

ನಿರ್ಣಯವನ್ನು ಬೆಂಬಲಿಸಿದ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸುರೇಶ್ ಅಂಗಡಿ ಅವರು ನಿಧನರಾಗಿರುವುದು ದುಃಖದ ಸಂಗತಿ. ಕೊರೋನ ಸೋಂಕಿಗೆ ತುತ್ತಾಗಿದ್ದ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟ. ಶಿವಮೊಗ್ಗ ಸೇರಿದಂತೆ ರಾಜ್ಯದ ನಾಲ್ಕೈದು ಕಡೆ ಇತ್ತೀಚೆಗೆ ಮೇಲ್ಸೇತುವೆಗೂ ಅನುಮೋದನೆ ಕೊಟ್ಟಿದ್ದರು. ಬೆಳಗಾವಿ ಭಾಗದಲ್ಲಿ ರಾಜಕೀಯವಾಗಿ ಬಿಜೆಪಿಗೆ ಶಕ್ತಿ ತುಂಬಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಂತಹ ಸಂಸ್ಥೆಯಲ್ಲೇ ಸುರೇಶ್ ಅಂಗಡಿ ಅವರು ಗುಣಮುಖವಾಗಲಿಲ್ಲ ಎಂದರೆ ಬೇರೆಯವರ ಪಾಡೇನು. ಅವರಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆಗೆ ಅವಕಾಶವಿತ್ತು. ಸದನದ ಹಲವು ಸದಸ್ಯರು ಕೊರೋನದಿಂದ ಗುಣಮುಖರಾಗಿ ಬಂದಿದ್ದಾರೆ. ಮತ್ತೆ ಬರುವುದಿಲ್ಲ ಎಂಬುದು ಖಾತ್ರಿ ಇಲ್ಲ. ಎಲ್ಲರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದರು.

ವಿಧಾನಸಭೆ ಉಪಾಧ್ಯಕ್ಷ ಆನಂದ ಮಹಾಮನಿ ಮಾತನಾಡಿ, ಸುರೇಶ್ ಅಂಗಡಿ ಅವರು ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ ಆರಂಭಕ್ಕೆ ಕಾರಣರಾದವರು. ಬೆಂಗಳೂರು-ಬೆಳಗಾವಿ ರೈಲ್ವೆಯನ್ನು ಪ್ರಾರಂಭಿಸಿದರು ಎಂದು ಗುಣಗಾನ ಮಾಡಿದರು. ಜೆಡಿಎಸ್‍ನ ಬಂಡೆಪ್ಪ ಕಾಶೆಂಪೂರ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೋಮಶೇಖರ ರೆಡ್ಡಿ ಸೇರಿ ಹಲವರು ಮೃತರ ಗುಣಗಾನ ಮಾಡಿ ಸಂತಾಪ ಸೂಚಿಸಿದರು.

ಸಂತಾಪ ಸೂಚನಾ ನಿರ್ಣಯವನ್ನು ಮೃತರ ಕುಟುಂಬದವರಿಗೆ ಕಳುಹಿಸಿಕೊಡುವುದಾಗಿ ಘೋಷಿಸಿದ ಸ್ಪೀಕರ್, ಮೃತರ ಗೌರವಾರ್ಥ ಸದನದಲ್ಲಿ 1 ನಿಮಿಷ ಶೋಕಾಚರಣೆ ಮಾಡಿದ ಬಳಿಕ ಸದನದ ಕಾರ್ಯ ಕಲಾಪಗಳನ್ನು ಅರ್ಧಗಂಟೆ ಕಾಲ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News