ಖಾಸಗಿ ಆಸ್ಪತ್ರೆಗಳ ನಿಯಂತ್ರಣದ ಹೊಣೆ ಆಯುಕ್ತರಿಗೆ: ಆರೋಗ್ಯ ಸಚಿವ ಶ್ರೀರಾಮುಲು

Update: 2020-09-24 12:17 GMT

ಬೆಂಗಳೂರು, ಸೆ.24: ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಖಾಸಗಿ ವೈದ್ಯಕೀಯ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ದೂರುಗಳನ್ನು ವಿಲೇವಾರಿ ಮಾಡುವುದಕ್ಕೆ ಬಿಬಿಎಂಪಿ ಆಯುಕ್ತರಿಗೆ ಅಧಿಕಾರ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಗುರುವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2020 ಕುರಿತು ನಡೆದ ಚರ್ಚೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಆದರೆ, ಬೆಂಗಳೂರು ನಗರ ದೊಡ್ಡದಾದ ಹಿನ್ನೆಲೆಯಲ್ಲಿ ಆಯುಕ್ತರು ಅದರ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಬರುವ ದೂರುಗಳನ್ನು ಸ್ವೀಕರಿಸಿ ವಿಲೇವಾರಿ ಮಾಡುವರು ಎಂದರು.

ಬಿಬಿಎಂಪಿ ಆಯುಕ್ತರಿಗೆ ಅಧಿಕಾರ ನೀಡುವುದಕ್ಕೆ ವಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಕಾಯ್ದೆಯನ್ನು ತರುವ ಅಗತ್ಯವೇನಿತ್ತು. ಆದರೂ, ಆಯುಕ್ತರಿಗೆ ಪಾಲಿಕೆಯ ಕಾರ್ಪೋರೇಟರ್ ಗಳನ್ನೇ ಗುರುತಿಸಲಾಗುತ್ತಿಲ್ಲ. ಅಷ್ಟೊಂದು ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಇನ್ನು, ಇದನ್ನು ಹೆಚ್ಚುವರಿಯಾಗಿ ಹೇರಿಕೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್‍ನ ಮರಿತಿಬ್ಬೇಗೌಡ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ಪಾಲಿಕೆ ವ್ಯಾಪ್ತಿ ಬಹಳಷ್ಟು ದೊಡ್ಡದಾಗಿದೆ. ಈಗಾಗಲೇ ಕಾಮಗಾರಿಗಳ ಪರಿಶೀಲನೆ, ಮಳೆ, ಕಸ ನಿರ್ವಹಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಆಯುಕ್ತರು ನೋಡಿಕೊಳ್ಳುತ್ತಿದ್ದಾರೆ. ಆದುದರಿಂದ ಆಯುಕ್ತರ ಮೇಲೆ ಒತ್ತಡ ಹೇರುವುದರ ಬದಲಿಗೆ, ವಲಯವಾರು ವಿಂಗಡನೆ ಮಾಡಿ ಪ್ರಭಾರ ಆಯುಕ್ತರಿಗೆ ಹೊಣೆಗಾರಿಕೆಯನ್ನು ನೀಡಿ ಎಂದು ಆಗ್ರಹಿಸಿದರು.

ಆಯುಕ್ತರ ನೇಮಕಕ್ಕೆ ಸ್ಪಷ್ಟೀಕರಣ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಒಬ್ಬ ಡಿಸಿ ವ್ಯಾಪ್ತಿಯ ಅಡಿಯಲ್ಲಿ ಬಿಬಿಎಂಪಿ ಬರಲ್ಲ, ಇದು ಡಿಸಿ ವ್ಯಾಪ್ತಿ ಮೀರಿದ್ದು ಹಾಗಾಗಿ ಬೇರೆ ಅಧಿಕಾರಿ ಇರಬೇಕು ಎಂದು ಈ ತಿದ್ದುಪಡಿ ಮಾಡುತ್ತಿದ್ದೇವೆ ಎಂದರು.

ನಂತರ ಮಾತನಾಡಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬೆಂಗಳೂರಿನಲ್ಲಿ ನಗರ ಹಾಗು ಗ್ರಾಮಾಂತರ ಇರುವ ಕಾರಣ ಹಾಗೂ ಕಂಟೈನ್‍ಮೆಂಟ್ ಝೋನ್‍ಗಳನ್ನು ಪಾಲಿಕೆ ಆಯುಕ್ತರೇ ನಿರ್ವಹಣೆ ಮಾಡುತ್ತಿದ್ದಾರೆ, ಹಾಗಾಗಿ ಅವರಿಗೇ ಅವಕಾಶ ನೀಡಿ ಬಿಲ್ ತಂದಿದ್ದೇವೆ. ಇದನ್ನು ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು.

ಈ ಸಂಬಂಧ ಪರಿಷತ್‍ನಲ್ಲಿ ಸುದೀರ್ಘವಾದ ಚರ್ಚೆಯಾಯಿತು. ವಿಪಕ್ಷ ಸದಸ್ಯರಾದ ಆರ್.ಬಿ.ತಿಮ್ಮಾಪುರ, ಪ್ರಕಾಶ್ ರಾಥೋಡ್, ಯು.ಬಿ.ವೆಂಕಟೇಶ್, ನಸೀರ್ ಅಹಮದ್ ಸೇರಿದಂತೆ ಅನೇಕರು ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News