ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ: ವಿಧಾನಸಭೆಯಲ್ಲಿ ಸಂತಾಪ

Update: 2020-09-24 14:32 GMT

ಬೆಂಗಳೂರು, ಸೆ.24: ಕೋವಿಡ್-19 ಇಂದ ಅಸುನೀಗಿದ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್(65) ನಿಧನಕ್ಕೆ ಗುರುವಾರ ವಿಧಾನಸಭೆಯಲ್ಲಿ ಸಂತಾಪ ಸಲ್ಲಿಸಲಾಯಿತು.

ಭೋಜನ ವಿರಾಮದ ಬಳಿಕ ವಿಧಾನಸಭೆ ಸಮಾವೇಶಗೊಂಡು ಆರ್ಥಿಕ ಹೊಣೆಗಾರಿಕೆ(ತಿದ್ದುಪಡಿ) ವಿಧೇಯಕದ ಮೇಲೆ ವಿರೋಧ ಪಕ್ಷದ ನಾಯಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತು ಆರಂಭಿಸುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಚಿವ ಮಾಧುಸ್ವಾಮಿ ಈ ವಿಷಯವನ್ನು ತಿಳಿಸಿದರು. ಕೂಡಲೇ ಅವರು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಪುನಃ ಸದನ ಸೇರುತ್ತಿದ್ದಂತೆ ಮಾತನಾಡಿದ ಸ್ಪೀಕರ್ ಕಾಗೇರಿ, ದುಃಖದ ಮಾತನ್ನು ಇವತ್ತು ಮತ್ತೊಮ್ಮೆ ಹೇಳುವ ಅನಿವಾರ್ಯತೆ ಈ ಸದನಕ್ಕೆ ಬಂದಿದೆ. ನಮ್ಮ 15ನೆ ವಿಧಾನಸಭೆಯ ಸದಸ್ಯ ನಾರಾಯಣರಾವ್ ಕೋವಿಡ್-19 ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ 1955ರ ಜು.1ರಂದು ಜನಿಸಿದ ನಾರಾಯಣರಾವ್, ಎಂ.ಎ.ಪದವೀಧರು, ಕೃಷಿಕರು, ಸಮಾಜ ಸೇವಕರು, ಬಡವರು, ದೀನ ದಲಿತರ ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದರು. 2018ರಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಚುನಾಯಿತರಾದ ಅವರು, 2019ರಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶಾಸಕ ಬಿ.ನಾರಾಯಣರಾವ್ ಕೋವಿಡ್‍ನಿಂದ ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ. ನಿನ್ನೆಯಷ್ಟೆ ರೈಲ್ವೆ ಸಚಿವ ಸುರೇಶ್ ಅಂಗಡಿ ನಿಧನರಾದ ದುಃಖದಿಂದ ನಾವು ಚೇತರಿಸಿಕೊಳ್ಳುವ ಮುನ್ನ, ಮತ್ತೊಂದು ಆಘಾತ ಎದುರಾಗಿದೆ ಎಂದರು.

ಕೊರೋನ ಸೋಂಕಿನಿಂದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನರ ಜ್ವಲಂತ ಸಮಸ್ಯೆಗಳ ಧ್ವನಿ ಎತ್ತುತ್ತಿದ್ದರು. ಅಸಾಧಾರಣ ವಾಗ್ಮಿ, ಬಸವಣ್ಣ ಬಗ್ಗೆ ದೃಢ ನಂಬಿಕೆಯಿಟ್ಟಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದ ನಾರಾಯಣರಾವ್, ಬಸವಕಲ್ಯಾಣ ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿದ್ದರು ಎಂದು ಅವರು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾರಾಯಣರಾವ್ ಸಾವು ನನಗೆ ಬಹಳ ದುಃಖವನ್ನುಂಟು ಮಾಡಿದೆ. ನನ್ನ ಒಂದೇ ಒಂದು ಗುರಿ, ಒಮ್ಮೆಯಾದರೂ ವಿಧಾನಸಭೆಗೆ ಶಾಸಕನಾಗಿ ಬರಬೇಕು ಎಂದು ಪದೇ ಪದೇ ಹೇಳುತ್ತಿದ್ದರು. ಮೂರು ಬಾರಿ ಸ್ಪರ್ಧಿಸಿ, ಎರಡು ಬಾರಿ ಸೋತರು. ಅಂತಿಮವಾಗಿ 2018ರಲ್ಲಿ ಬಸವಕಲ್ಯಾಣದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಆದರೆ, ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದರು.

ನನಗೆ 1983-84ರಿಂದಲೂ ನಾರಾಯಣರಾವ್ ಪರಿಚಯ, ನನಗಿಂತ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಹೋದವರು. ಆರಂಭದಿಂದಲೂ ಹೋರಾಟದ ಬದುಕು, ಕೋಲಿ ಸಮಾಜ, ಗಂಗಮತಸ್ತರು, ಬೆಸ್ತರು, ಮೊಗವೀರರು, ಮೀನುಗಾರರಿಗೆ ಎಸ್‍ಟಿಗೆ ಸೇರಿಸುವಂತೆ ಆಗ್ರಹಿಸಿ ಬೀದರ್ ನಿಂದ ಬೆಂಗಳೂರಿಗೆ ಸೈಕಲ್ ಜಾಥಾ ಮಾಡಿದ್ದರು. ಅಲ್ಲದೆ, ಬೀದರ್, ಗುಲ್ಬರ್ಗ ಭಾಗದಲ್ಲಿರುವ ಗೊಂಡ ಕುರುಬರ ಪರವಾಗಿಯೂ ಹೋರಾಟ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ಬಲ್ಲಾಳ್ ಅವರ ಜೊತೆ ದಿನನಿತ್ಯ ಅವರ ಆರೋಗ್ಯದ ಬಗ್ಗೆ ಸಂಪರ್ಕದಲ್ಲಿದ್ದೆ. 3-4 ದಿನ ಹಿಂದೆ ಸ್ವಲ್ಪ ಆರೋಗ್ಯ ಸುಧಾರಿಸಿದೆ, ಐಸಿಯುನಿಂದ ಹೊರಗೆ ಬರಬಹುದು ಎಂದಿದ್ದರು. ಇವತ್ತು ಬೆಳಗ್ಗೆ ಅವರು ಫೋನ್ ಮಾಡಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ, ಬಹು ಅಂಗಾಂಗ ವೈಫಲ್ಯವಾಗಿದೆ. ರಕ್ತದೊತ್ತಡ ಇಳಿಕೆ ಆಗಿದೆ ಎಂದರು. ನಾರಾಯಣರಾವ್ ಇದ್ದಿದ್ದರೆ ಮುಂದಿನ ದಿನಗಳಲ್ಲಿ ಅವರು ಒಳ್ಳೆಯ ಸಂಸದೀಯ ಪಟುವಾಗುತ್ತಿದ್ದರು. ಈ ಸದನಕ್ಕೆ ಆಸ್ತಿಯಾಗಿರುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ನನ್ನ ಹಿರಿಯಣ್ಣನನ್ನು ಕಳೆದುಕೊಂಡಂತಾಗಿದೆ. ರಾಜಕೀಯ ಪ್ರವೇಶದಿಂದ ವಿಧಾನಸಭೆಗೆ ಬರುವವರೆಗಿನ ಅವರ ಹೋರಾಟವನ್ನು ನಾವು ನೋಡಿದ್ದೇವೆ. ಬೀದರ್ ನಲ್ಲಿ ಹುಟ್ಟಿದ್ದರೂ ಬಸವಕಲ್ಯಾಣದಲ್ಲಿ ತಮ್ಮ ಛಾಪನ್ನು ಮೂಡಿಸಿದರು ಎಂದರು.

ನಾರಾಯಣರಾವ್ ಕೋಲಿ ಸಮಾಜದವರು ಎಂಬುದು ನಮಗೆ ಗೊತ್ತೇ ಇರಲಿಲ್ಲ. ಆ ರೀತಿಯಲ್ಲಿ ಅವರು ನಮ್ಮ ಸಮಾಜದ ಪರವಾಗಿ ಹೋರಾಟ ಮಾಡುತ್ತಿದ್ದರೂ ಎಂದು ಅವರು ಹೇಳಿದರು.

ಸದಸ್ಯರಾದ ಕೆ.ಪೂರ್ಣಿಮಾ, ಕೆ.ಎಸ್.ಲಿಂಗೇಶ್, ಈಶ್ವರ್ ಖಂಡ್ರೆ, ಎ.ಟಿ.ರಾಮಸ್ವಾಮಿ, ಡಾ.ಕೆ.ಅನ್ನದಾನಿ, ಲಾಲಾಜಿ ಮೆಂಡನ್, ರಾಜಶೇಖರ್ ಪಾಟೀಲ್, ಡಾ.ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿ, ನಾರಾಯಣರಾವ್ ಅವರಿಗೆ ಸಂತಾಪ ಸಲ್ಲಿಸಿದರು. ಆನಂತರ ಸದನದಲ್ಲಿ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿ, ಸದನವನ್ನು ಮುಂದೂಡಲಾಯಿತು.

ಮದುವೆ, ಸಾರ್ವಜನಿಕ ಸಭೆಗಳಿಗೆ ಕಡಿವಾಣ ಹಾಕಿ

ಕೊರೋನ ಸೋಂಕು ಸಮುದಾಯಕ್ಕೆ ಹರಡಿದೆ. ಜನರಿಗೆ ಯಾಕೆ ಈ ಬಗ್ಗೆ ಭಯವಿಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೊಡ್ಡ ಮನಸ್ಸು ಮಾಡಿ, ಎಲ್ಲ ಎಸ್ಪಿ, ಡಿಸಿಗಳಿಗೆ ಸೂಚನೆ ನೀಡಿ, ಮದುವೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯದಂತೆ ಕಡಿವಾಣ ಹಾಕಿ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News