ಕೇಂದ್ರ ಸರಕಾರದ ನೀತಿಗಳ ವಿರುದ್ಧ ಕಾರ್ಮಿಕರ ಆಕ್ರೋಶ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Update: 2020-09-24 14:59 GMT

ಬೆಂಗಳೂರು, ಸೆ.24: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳದಂತಹ ತಿದ್ದುಪಡಿ ಕೈಬಿಡಬೇಕು ಒಳಗೊಂಡಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸೇರಿದಂತೆ ಅಸಂಘಟಿತ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿತು.

ಗುರುವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಲಾಕ್‍ಡೌನ್ ವೇಳೆ ಅಸಂಘಟಿತ ಕಾರ್ಮಿಕರು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್‍ಲಾಕ್ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಳ್ಳದ ಕಾರಣ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಶೇ. 80ರಷ್ಟು ಸಂಘಟಿತ ಕಾರ್ಮಿಕರಿಗೆ ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ಅಷ್ಟೇ ಅಲ್ಲದೆ, ನೀಡಿರುವ ವೇತನಕ್ಕೆ ಮುಂಗಡವಾಗಿ ಕೆಲಸ ಮಾಡಬೇಕೆಂದು ಮಾಲಕರು ಒತ್ತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕೇಂದ್ರ ಸರಕಾರದ ಕಾರ್ಪೋರೇಟ್ ಪರ ನೀತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ಎಲ್ಲ ವಲಯಗಳಲ್ಲಿ ದೇಶಿ ಹಾಗೂ ವಿದೇಶಿ ಖಾಸಗಿ ಬಂಡವಾಳದಾರರ ಲೂಟಿಗೆ ವೇಗವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಕೃಷಿ, ಕಾರ್ಮಿಕ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಕಾರ್ಪೋರೇಟ್‍ಗಳ ಲಾಭಕ್ಕೆ ಬದಲಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಿಐಟಿಯು ಮುಖಂಡ ಕೆ.ಎನ್ ಉಮೇಶ್ ಮಾತನಾಡಿ, ಕೇಂದ್ರ ಸರಕಾರ ಅವೈಜ್ಞಾನಿಕ ಲಾಕ್‍ಡೌನ್ ಹೇರಿದ್ದಲ್ಲದೇ, ಸಾಂಕ್ರಾಮಿಕ ಕಾಲದಲ್ಲಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ಸರಕಾರಿ ಕಂಪೆನಿಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಇದಕ್ಕೂ ಮೊದಲು ಸಿಐಟಿಯು ರಾಜ್ಯ ಅಧ್ಯಕ್ಷೆ ವರಲಕ್ಷ್ಮೀ ಮಾತನಾಡಿ, ಕೇಂದ್ರ ಸರಕಾರವು ವಿದೇಶಿ ಹೂಡಿಕೆದಾರರಿಗಾಗಿ ಕೆಲಸ ಮಾಡುತ್ತಿದೆ. ಅವರ ಪರವಾದ ಕಾನೂನುಗಳನ್ನು ಲೋಕಸಭೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕರ ಸಾಮೂಹಿಕ ಚೌಕಾಶಿಯನ್ನು ಸರಕಾರ ಇಲ್ಲದಾಗಿಸಿದೆ. ಅಲ್ಲದೆ, ಕೊರೋನ ಸಮಯದಲ್ಲಿ ಜನರಿಗೆ ಕೆಲಸ ಮಾಡಬೇಕಿದ್ದ ಸರಕಾರ ಶ್ರೀಮಂತರ ಪರವಾಗಿದೆ. ಇದರಿಂದ ಕಾರ್ಮಿಕರು ಕೆಲಸ ಮಾತ್ರವಲ್ಲ ಬದುಕನ್ನೇ ಕಳೆದುಕೊಂಡಿದ್ದಾರೆ ಎಂದರು.

ಬಿಜೆಪಿ ಪಾಪದ ಕೊಡ ತುಂಬಿದೆ

ಭಾರತ ಮೋದಿ, ಯಡಿಯೂರಪ್ಪನವರದಲ್ಲ. ಭಾರತವನ್ನು ಕಟ್ಟಿದವರು ನಾವು ಅಂದರೆ ದೇಶದ ಕಾರ್ಮಿಕರು. ಬಿಜೆಪಿ ಸಂತತಿಯ ಪಾಪದ ಕೊಡ ತುಂಬಿದೆ. ಹಾಗಾಗಿ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ.

-ಕೆ.ಎನ್.ಉಮೇಶ್, ಸಿಐಟಿಯು ಮುಖಂಡ 

ಹಕ್ಕೊತ್ತಾಯಗಳು

* 2021-21 ರ ಸಾಲಿನ ತುಟ್ಟಿಭತ್ಯೆ ಮುಂದೂಡಿಕೆ ಆದೇಶ ರದ್ದು ಮಾಡಿ, ಬಾಕಿ ಹಣ ನೀಡಬೇಕು.

* ಅಂತರ್ ರಾಜ್ಯ ವಲಸೆ ಕಾರ್ಮಿಕ (ಉದ್ಯೋಗ ಮತ್ತು ಸೇವಾ ಶರತ್ತುಗಳ) ಕಾಯ್ದೆ-1970 ಅನ್ನು ಜಾರಿಗೊಳಿಸಬೇಕು.

* ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ರಾಜ್ಯ ಸರಕಾರ ತಂದಿರುವ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು.

* ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು.

* ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ತೆ ಮಾಸಿಕ 10,000 ರೂಗಳನ್ನು ನೀಡಬೇಕು.

* 21 ಸಾವಿರ ರೂ, ಸಮಾನ ಕನಿಷ್ಟ ವೇತನ ನಿಗದಿ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News