ಆಂತರಿಕ ಭದ್ರತಾ ಕರ್ತವ್ಯಗಳಿಂದ ಗಡಿ ಕಾವಲು ಪಡೆಗಳಿಗೆ ಮುಕ್ತಿ

Update: 2020-09-24 15:15 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.24: ಆಂತರಿಕ ಭದ್ರತಾ ಕರ್ತವ್ಯಗಳಿಂದ ಬಿಎಸ್‌ಎಫ್, ಐಟಿಬಿಪಿ ಹಾಗೂ ಸೀಮಾ ಸುರಕ್ಷಾ ಬಲ್‌ನಂತಹ ಗಡಿಕಾವಲು ಪಡೆಗಳನ್ನು ಕ್ರಮೇಣವಾಗಿ ಮುಕ್ತಗೊಳಿಸುವಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶ್ರಮಿಸುತ್ತಿದೆ. ದೇಶದ ವಿವಿಧ ಗಡಿ ಮುಂಚೂಣಿಗಳ ರಕ್ಷಣೆಯನ್ನು ಬಲಪಡಿಸುವುದೇ ಇದರ ಉದ್ದೇಶವಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಇಂದು ನಡೆದ ಭದ್ರತಾಪಡೆಗಳ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಲಾಯಿತೆಂದು ತಿಳಿದುಬಂದಿದೆ.ಚುನಾವಣಾ ಕರ್ತವ್ಯಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಆಂತರಿಕ ಭದ್ರತಾ ಕರ್ತವ್ಯಗಳ ಹೊರೆಯನ್ನು ಇಳಿಸಲು ಹಾಗೂ ಈ ಹೊಣೆಗಾರಿಕೆಗಳನ್ನು ದೇಶದ ಅತಿದೊಡ್ಡ ಅರೆಸೈನಿಕ ಪಡೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

3.25 ಲಕ್ಷ ಯೋಧರನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಅತಿ ದೊಡ್ಡ ಆಂತರಿಕ ಭದ್ರತಾಪಡೆಯಾಗಿದೆ.

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಈ ನೂತನ ಪ್ರಯೋಗವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಭದ್ರತಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಚುನಾವಣೆಗಳಲ್ಲಿ ರಾಜ್ಯದ ಪೊಲೀಸ್ ಪಡೆಗಳ ಜೊತೆಗೆ ಸಿಆರ್‌ಪಿಎಫ್ ಯೋಧರನ್ನು 70:30 ಪ್ರಮಾಣದಲ್ಲಿ ನಿಯೋಜಿಸಲಾಗುವುದು ಎಂದು ಅವು ಹೇಳಿವೆ.

ಈ ಚುನಾವಣೆಗಳ ಭದ್ರತಾ ಕರ್ತವ್ಯದ ನಿರ್ವಹಣೆಯನ್ನು ಸಂಪೂರ್ಣವಾಗಿ ಸಿಆರ್‌ಪಿಎಫ್‌ಗೆ ವಹಿಸಲಾಗುವುದು. ಗಡಿ ಕಾವಲು ಪಡೆಗಳಾದ ಗಡಿಭದ್ರತಾ ಪಡೆ, ಇಂಡೋ-ಟಿಬೆಟನ್ ಗಡಿಭದ್ರತಾ ಪೊಲೀಸ್ ಪಡೆ ಹಾಗೂ ಸಶಸ್ತ್ರ ಸೀಮಾ ಬಲ ಇವನ್ನು ಕ್ರಮೇಣವಾಗಿ ಆಂತರಿಕ ಕರ್ತವ್ಯಗಳಿಗೆ ಮುಕ್ತಗೊಳಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿಭದ್ರತಾ ಪಡೆ (ಬಿಎಸ್‌ಎಫ್)ಗೆ ಪಾಕಿಸ್ತಾನದ ( 3,300 ಕಿ.ಮೀ.) ಹಾಗೂ ಬಾಂಗ್ಲಾದೇಶದ (4,096 ಕಿ.ಮೀ.) ವಿಸ್ತೀರ್ಣದ ಸೂಕ್ಷ್ಮಸಂವೇದಿ ಅಂತರ್ ರಾಷ್ಟ್ರೀಯ ಗಡಿಗಳ ಕಾವಲು ನಡೆಸುವ ಹೊಣೆಯನ್ನು ಹೊಂದಿವೆ. ಐಟಿಬಿಪಿಯು ಚೀನಾದೊಂದಿಗಿನ 3,488 ಕಿ.ಮೀ. ವಿಸ್ತೀರ್ಣದ ವಾಸ್ತವ ಗಡಿ ನಿಯಂತ್ರಣ (ಎಲ್‌ಎಸಿ) ರೇಖೆಯ ಕಾವಲು ಕಾಯುತ್ತಿದೆ. ಸಶಸ್ತ್ರ ಸೀಮಾ ಬಲ್‌ನ ಯೋಧರು ನೇಪಾಳ (1,751 ಕಿ.ಮೀ.) ಹಾಗೂ ಭೂತಾನ್ (699 ಕಿ.ಮೀ.) ಜೊತೆಗಿನ ಭಾರತದ ಗಡಿಗಳನ್ನು ಕಾಯುತ್ತಿದ್ದಾರೆ.

ಮ್ಯಾನ್ಮಾರ್ ಜೊತೆಗಿನ ಗಡಿಯನ್ನು ಕಾಯುವ ಅಸ್ಸಾಂ ರೈಫಲ್ಸ್ ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆಯಾದರೂ, ಅದನ್ನು ಸೇನಾ ಸಿಬ್ಬಂದಿ ಹಾಗೂ ಸೇನಾಧಿಕಾರಿಗಳು ನಿರ್ವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News