ಜೈಲುಗಳು ಹರಡುತ್ತಿರುವ ಕೊರೋನ

Update: 2020-09-25 05:00 GMT

ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ತುಂಬಿ ತುಳುಕುತ್ತಿರುವ ಏಕೈಕ ಸ್ಥಳವೆಂದರೆ ಜೈಲು. ಸರಕಾರವನ್ನು ಪ್ರಶ್ನಿಸಿದವರನ್ನೆಲ್ಲ ಬೇರೆ ಬೇರೆ ಕಾಯ್ದೆಯಡಿಯಲ್ಲಿ ಬಂಧಿಸಿ ಜೈಲಿಗೆ ತಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವ ಕಾರಣದಿಂದ, ಭಾರತದಲ್ಲಿ ಶೌಚಾಲಯಕ್ಕಿಂತಲೂ ಜೈಲುಗಳ ಬೇಡಿಕೆ ಹೆಚ್ಚಾಗುತಿವೆ. ಈವರೆಗೆ ಜೈಲುಗಳು ಕಸ್ಟಡಿ ಸಾವುಗಳಿಗಾಗಿ ಸುದ್ದಿಯಾಗುತ್ತಿದ್ದವು. ಕೊರೋನ ದಿನಗಳಲ್ಲಿ ಜೈಲುಗಳು ‘ಕೊರೋನ ಸಾವು’ಗಳಿಗಾಗಿ ಸುದ್ದಿಯಾಗುತ್ತಿವೆ. ಈ ಹಿಂದೆ, ಕಸ್ಟಡಿ ಸಾವುಗಳು ಸಂಭವಿಸಿದಾಗ ಅದರ ಕುರಿತಂತೆ ಕನಿಷ್ಠ ಕಾಟಾಚಾರದ ತನಿಖೆಯಾದರೂ ನಡೆಯುತ್ತಿತ್ತು. ಇಂದು ಜೈಲುಗಳಲ್ಲಿ ಸಂಭವಿಸುವ ಕೊರೋನ ಸೋಂಕುಗಳನ್ನು ಪ್ರಶ್ನಿಸುವವರೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಅಭಿಯಾನ (ಎನ್‌ಸಿಎಟಿ) ತನ್ನ ‘ಭಾರತದ ಕಾರಾಗೃಹಗಳಲ್ಲಿ ಕೋವಿಡ್- 19 ಸ್ಥಿತಿಗತಿ’ ಎಂಬ ವರದಿಯಲ್ಲಿ ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಪೈಕಿ 25ರಲ್ಲಿನ ಕನಿಷ್ಠ 351 ಜೈಲುಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ. ಗರಿಷ್ಠ ಸಂಖ್ಯೆಯ ಕೊರೋನ ಸೋಂಕಿನ ಪ್ರಕರಣಗಳು ಉತ್ತರಪ್ರದೇಶದಲ್ಲಿ ವರದಿಯಾಗಿದ್ದು ಬೆಳಕಿಗೆ ಬಂದಿವೆ. ಮಧ್ಯಪ್ರದೇಶ (34), ಮಹಾರಾಷ್ಟ್ರ (32), ಒಡಿಶಾ (31), ಆಂಧ್ರಪ್ರದೇಶ (28),ರಾಜಸ್ಥಾನ ಹಾಗೂ ತಮಿಳುನಾಡು (ತಲಾ 21), ಅಸ್ಸಾಂ (19), ಪಶ್ಚಿಮ ಬಂಗಾಳ (18), ಪಂಜಾಬ್ (17), ಬಿಹಾರ (15), ದಿಲ್ಲಿ (14), ಜಾರ್ಖಂಡ್ (13), ಕರ್ನಾಟಕ (9), ಹರ್ಯಾಣ (8), ಕೇರಳ (7), ಗುಜರಾತ್ ಹಾಗೂ ಛತ್ತೀಸ್‌ಗಡ (ತಲಾ 6), ಜಮ್ಮುಕಾಶ್ಮೀರ ಹಾಗೂ ಉತ್ತರಾಖಂಡ (ತಲಾ 5), ತೆಲಂಗಾಣ (3) ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ ಹಾಗೂ ತ್ರಿಪುರಾ (ತಲಾ 1) ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.

ಜೈಲು ಎನ್ನುವುದು ಸಮುದಾಯದಿಂದ ದೂರ ಇರುವಂತಹ ಪ್ರದೇಶ. ಒಂದು ರೀತಿಯಲ್ಲಿ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳ ಸ್ಥಿತಿ ಕ್ವಾರಂಟೈನ್ ರೂಪದಲ್ಲೇ ಇರುತ್ತದೆ. ಎಲ್ಲರಲ್ಲೂ ಬೆರೆಯುವ, ಹೊರಗಿನ ಜನರೊಂದಿಗೆ ಸಂಪರ್ಕ ಮಾಡುವ ಸಂದರ್ಭಗಳು ಇಲ್ಲದೇ ಇರುವುದರಿಂದ, ಜೈಲುಗಳಿಗೆ ಕೊರೋನ ಯಾವ ಕಾರಣಕ್ಕೂ ಕಾಲಿಡಬಾರದಾಗಿತ್ತು. ಆದರೆ ಭಾರತದಲ್ಲಿ ಸಮುದಾಯ ಹಂತಕ್ಕೆ ತಲುಪುವ ಮೊದಲೇ ಕೊರೋನ ಕೈದಿಗಳನ್ನು ತಲುಪಿತು. ಕೋವಿಡ್-19 ಸೋಂಕಿನ ಹಾವಳಿಯಿರುವ ಜೈಲುಗಳ ಪೈಕಿ 52 ರಲ್ಲಿ ಶೇ.101ರಿಂದ ಶೇ.302ರಷ್ಟು ಪ್ರಮಾಣದಲ್ಲಿ ಕೈದಿಗಳ ದಟ್ಟಣೆಯಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಟಿಸಿರುವ ‘ಭಾರತದಲ್ಲಿ ಕೈದಿಗಳ ಅಂಕಿಅಂಶ’ ವರದಿಯ ಪ್ರಕಾರ ಶೇ.312ರಷ್ಟು ಕೈದಿಗಳ ದಟ್ಟಣೆಯೊಂದಿಗೆ ಮುಂಬೈನ ಕೇಂದ್ರೀಯ ಕಾರಾಗೃಹವು ಅಗ್ರಸ್ಥಾನದಲ್ಲಿದೆ.ತಿರುವನಂತಪುರದ ಸೆಂಟ್ರಲ್ ಜೈಲು, ಕೇರಳ (ಶೇ.306 ), ಬಡೌನ್ ಜಿಲ್ಲಾ ಕಾರಾಗೃಹ, ಉತ್ತರಪ್ರದೇಶ (ಶೇ.289), ಲಚಾರ್ ಜಿಲ್ಲಾ ಕಾರಾಗೃಹ, ಜಾರ್ಖಂಡ್ (ಶೇ.268), ಮುರದಾಬಾದ್ ಜಿಲ್ಲಾ ಕಾರಾಗೃಹ, ಉತ್ತರಪ್ರದೇಶ (ಶೇ.256), ಖಾಂಡ್ವಾ ಜಿಲ್ಲಾ ಕಾರಾಗೃಹ ( ಶೇ.252) ಹಾಗೂ ಬದೌನ್ ಜಿಲ್ಲಾ ಕಾರಾಗೃಹ, ಮಧ್ಯಪ್ರದೇಶ (ಶೇ.251), ದಿಲ್ಲಿಯ ತಿಹಾರ್ ಕಾರಾಗೃಹದ ಜೈಲು ನಂ.4 (ಶೇ.239) ಹಾಗೂ ನಂ.1 (ಶೇ.237) ಮತ್ತು ಉತ್ತರಪ್ರದೇಶ ಜಾನುಪುರ ಜಿಲ್ಲಾ ಕಾರಾಗೃಹ (ಶೇ.237) ಗಳು ಕ್ರಮವಾಗಿ ಕೈದಿಗಳ ಅತ್ಯಧಿಕ ದಟ್ಟಣೆಯಿರುವ ಜೈಲುಗಳಾಗಿವೆ.

ಭಾರತೀಯ ಜೈಲುಗಳಲ್ಲಿ 4,78,600ಕ್ಕೂ ಅಧಿಕ ಕೈದಿಗಳಿದ್ದಾರೆ. ಇದು ಭಾರತದ ಜೈಲುಗಳ ವಾಸ್ತವಿಕ ಅಥವಾ ಅನುಮೋದಿತ ಸಾಮರ್ಥ್ಯಕ್ಕಿಂತಲೂ ಅಧಿಕವಾದುದಾಗಿದೆ ಎಂದು ‘2019ರ ಭಾರತೀಯ ಜೈಲುಗಳ ಅಂಕಿಅಂಶಗಳು’ ಎಂಬ ವರದಿ ಬಹಿರಂಗಪಡಿಸಿತ್ತು. ಆದಾಗ್ಯೂ ಈ ವರದಿಯು ಅಪೂರ್ಣವಾಗಿದ್ದು, ದೇಶದ 1,350 ಜೈಲುಗಳಲ್ಲಿ ಕೈದಿಗಳ ಮಿತಿಮೀರಿದ ದಟ್ಟಣೆಯ ಕುರಿತ ನೈಜ ಅಂಕಿಅಂಶಗಳನ್ನು ಅದು ಪ್ರಕಟಿಸಿಲ್ಲವೆಂಬುದು ಸತ್ಯ. 2018ರ ಸಾಲಿನ ಭಾರತೀಯ ಕಾರಾಗೃಹಗಳ ಅಂಕಿಅಂಶಗಳ ವರದಿಯು ದೇಶದ ಜೈಲುಗಳಲ್ಲಿ ಕೈದಿಗಳು ಮಿತಿಮೀರಿದ ದಟ್ಟಣೆಯ ಬಗ್ಗೆ ತಾಜಾ ಮಾಹಿತಿಯನ್ನು ನೀಡಿದ್ದವು. ಆದರೆ 2019ರ ಸಾಲಿನ ವರದಿಯಲ್ಲಿ ಅದನ್ನು ನೀಡಲಾಗಿರಲಿಲ್ಲ.

2018ರ ಡಿಸೆಂಬರ್ ವೇಳೆಗೆ ಭಾರತದ ಜೈಲುಗಳ ಪೈಕಿ 538ರಲ್ಲಿ ಕೈದಿಗಳ ಮೀತಿಮೀರಿದ ಜನದಟ್ಟಣೆಯ ಪ್ರಮಾಣವು 1ರಿಂದ 636 ಶೇಕಡದಷ್ಟಿದ್ದು, ಇದು ಅಧಿಕೃತವಾಗಿ ಅನುಮೋದಿತವಾದ ಸಾಮರ್ಥ್ಯಕ್ಕಿಂತ ಅಧಿಕವಾಗಿದೆ. ಈ ಪೈಕಿ 34 ಕಾರಾಗೃಹಗಳಲ್ಲಿ ಕೈದಿಗಳ ದಟ್ಟಣೆಯು 201 ಶೇಕಡದಿಂದ 636 ಶೇಕಡದಷ್ಟಿದೆ. ಶೇಕಡ 100ರಷ್ಟು ಕಾರಾಗೃಹಗಳಲ್ಲಿ ಶೇ.100ರಿಂದ ಶೇ.200ರಷ್ಟು ದಟ್ಟಣೆಯಿದೆ. 404 ಜೈಲುಗಳಲ್ಲಿ ಕೈದಿಗಳ ಸಂಖ್ಯೆಯು ನಿಗದಿತ ಮಿತಿಗಿಂತ 1 ಶೇಕಡದಿಂದ 99 ಶೇಕಡದಷ್ಟು ಅಧಿಕವಾಗಿದೆ.

ಮಿತಿಮೀರಿದ ಸಂಖ್ಯೆಯಲ್ಲಿ ಕೈದಿಗಳನ್ನು ತುಂಬಿರುವ ದೇಶದ ಜೈಲುಗಳ ಪೈಕಿ ಕೇರಳದ ಇರಿಂಜಾಲಕುಡದ ವಿಶೇಷ ಜೈಲು ಅಗ್ರಸ್ಥಾನದಲ್ಲಿದೆ. ಆ ಜೈಲಿನಲ್ಲಿ ಕೈದಿಗಳ ದಟ್ಟಣೆಯು ನಿಗದಿತ ಮಿತಿಗಿಂತ ಶೇ.636ರಷ್ಟು ಅಧಿಕವಾಗಿದೆ.ಭಾರತೀಯ ಜೈಲುಗಳು ಕೈದಿಗಳಿಂದ ತುಂಬಿತುಳುಕುತ್ತಿರುವಂತೆಯೇ ಕೋವಿಡ್-19 ವೈರಸ್ ಸೋಂಕಿಗೆ ಯಾವುದೇ ಕೈದಿಯು ತುತ್ತಾಗುವ ಸಾಧ್ಯತೆಯು ಅತ್ಯಧಿಕವಾಗಿದೆ. ದೇಶದ ಕೆಲವು ಜೈಲುಗಳಲ್ಲಿ ಕೊರೋನ ವೈರಸ್ ಸೋಂಕು ಹರಡಿರುವುದನ್ನು ಗಮನಕ್ಕೆ ತೆಗೆದುಕೊಂಡ ಸುಪ್ರೀಂಕೋರ್ಟ್ 2020ರ ಮಾರ್ಚ್ 13ರಂದು ಆದೇಶವೊಂದರಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸುವ ಮೂಲಕ ಜೈಲುಗಳಲ್ಲಿನ ಜನಸಾಂಧ್ರತೆಯನ್ನು ಕಡಿಮೆಗೊಳಿಸುವುದಕ್ಕಾಗಿ ಹಲವಾರು ನಿರ್ದೇಶನಗಳನ್ನು ನೀಡಿತ್ತು.ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಸೆಪ್ಟ್ಟಂಬರ್ 7ರವರೆಗೆ ಒಟ್ಟಾರೆ 61,100 ಕೈದಿಗಳನ್ನು ಬಿಡುಗಡೆಗೊಳಿಸಲಾಗಿದ್ದು ಇದು ಕಾರಾಗೃಹಗಳ ಒಟ್ಟಾರೆ ಸಾಮರ್ಥ್ಯದ ಶೇ. 15.4ರಷ್ಟು ಕುಸಿತವೆಂದು ಕಾಮನ್‌ವೆಲ್ತ್ ಮಾನವಹಕ್ಕುಗಳ ಉಪಕ್ರಮ ಸಂಸ್ಥೆಯು ಬೆಟ್ಟು ಮಾಡಿ ತೋರಿಸಿದೆ.

ಕೊರೋನ ವೈರಸ್ ಹಾವಳಿ ತಾಂಡವವಾಡುತ್ತಿರುವಂತಹ ಈ ಸಂದರ್ಭದಲ್ಲಿ ಕೈದಿಗಳನ್ನು ಮಿತಿಮೀರಿದ ಸಂಖ್ಯೆಯಲ್ಲಿ ಜೈಲುಗಳಲ್ಲಿ ತುಂಬುವುದು ಅತ್ಯಂತ ಅಮಾನವೀಯವಾದುದು ಹಾಗೂ ಅವರನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಂಡಂತಾಗುತ್ತದೆ. ಒಂದು ರೀತಿಯಲ್ಲಿ, ಪರೋಕ್ಷವಾಗಿ ವಿಚಾರಣಾಧೀನ ಕೈದಿಗಳನ್ನು ವ್ಯವಸ್ಥೆಯೇ ಕೊರೋನಕ್ಕೆ ಬಲಿಕೊಡುತ್ತದೆ. ಅದು ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೂ ಇರಬಹುದು. ದೇಶದಲ್ಲಿ ಕೋವಿಡ್-19ರ ಅಟ್ಟಹಾಸವು ಸೆರೆಮನೆಗಳಲ್ಲಿ ಕೈದಿಗಳ ಮಿತಿಮೀರಿದ ದಟ್ಟಣೆಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯನ್ನುಂಟು ಮಾಡಿದೆ. ಅಷ್ಟೇ ಅಲ್ಲ ಮಿತಿಮೀರಿದ ಸಂಖ್ಯೆಯಲ್ಲಿ ಕೈದಿಗಳನ್ನು ಜೈಲಿನಲ್ಲಿ ತುರುಕಿಸುವ ಮೂಲಕ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಕಾನೂನುಬಾಹಿರವೂ ಆಗಿದೆ. ಜೈಲುಗಳ ಅನುಮೋದಿತ ಸಾಮರ್ಥ್ಯಕ್ಕಿಂತ ಅಧಿಕವಾಗಿದೆ. ಮಿತಿಮೀರಿದ ಸಂಖ್ಯೆಯಲ್ಲಿ ಕೈದಿಗಳನ್ನು ತುಂಬಿರುವ ಕಾರಾಗೃಹಗಳಿಂದ ಇತರ ಕಡಿಮೆ ಜನದಟ್ಟಣೆಯಿರುವ ಜೈಲುಗಳಿಗೆ ವರ್ಗಾಯಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಕೈದಿಗಳನ್ನು ಪರೋಲ್ ಅಥವಾ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಕ್ರಮಗಳನ್ನು ಕೈಗೊಳ್ಳುವುದು ಕೂಡಾ ಪ್ರಸಕ್ತ ಸನ್ನಿವೇಶದ ಅವಶ್ಯಕತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News