ಲೈಂಗಿಕ ಅಪರಾಧಿಗಳ ವಿರುದ್ಧ 'ಆಪರೇಷನ್ ದುರಾಚಾರಿ'

Update: 2020-09-25 04:00 GMT

ಲಕ್ನೋ, ಸೆ.25: ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 'ಆಪರೇಷನ್ ದುರಾಚಾರಿ' ಎಂಬ ವಿನೂತನ ಕಾರ್ಯಯೋಜನೆಗೆ ಉತ್ತರ ಪ್ರದೇಶ ಸರಕಾರ ಮುಂದಾಗಿದೆ. ಇದರ ಅನ್ವಯ ಲೈಂಗಿಕ ಅಪರಾಧಿಗಳನ್ನು ಅಂದರೆ ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗುವ ಆರೋಪಿಗಳನ್ನು ಹೆಸರಿಸಿ ಅವಮಾನಿಸಲಾಗುತ್ತದೆ (ನೇಮ್ & ಶೇಮ್). ಇದರ ಜತೆಗೆ ರಾಜ್ಯದಲ್ಲಿ ರೋಮಿಯೋ ನಿಗ್ರಹ ಪಡೆ ಬಲಗೊಳಿಸುವಂತೆಯೂ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

'ಆಪರೇಷನ್ ದುರಾಚಾರಿ' ಕಾರ್ಯಾಚರಣೆಯ ವಿಧಿವಿಧಾನಗಳನ್ನು ಇನ್ನೂ ಅಂತಿಮಪಡಿಸಿಲ್ಲವಾದರೂ, ಲೈಂಗಿಕ ಕಿರುಕುಳ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಎಸಗುವ ಅಭ್ಯಾಸ ರೂಢಿಸಿಕೊಂಡ ಅಪರಾಧಿಗಳ ಹೆಸರು ಹಾಗೂ ಭಾವಚಿತ್ರವನ್ನು ಪ್ರಮುಖ ಕಡೆಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಗೃಹ ಇಲಾಖೆ ಮೂಲಗಳು ಹೇಳಿವೆ.

ಮಹಿಳೆಯರ ವಿರುದ್ಧ ಅಪರಾಧ ಎಸಗಿದ ಆರೋಪಿಗಳನ್ನು ಮಹಿಳಾ ಅಧಿಕಾರಿಗಳೇ ವಿಚಾರಣೆಗೆ ಗುರಿಪಡಿಸಲಿದ್ದಾರೆ. ಮಹಿಳೆಯ ವಿರುದ್ಧ ಯಾವುದೇ ಅಪರಾಧ ಕೃತ್ಯ ನಡೆದಲ್ಲಿ ಆಯಾ ಗಸ್ತು ಹೊಣೆ ಹೊತ್ತಿರುವ ಅಧಿಕಾರಿ, ಹೊರಠಾಣೆ ಉಸ್ತುವಾರಿ, ಠಾಣೆ ಉಸ್ತುವಾರಿ, ವೃತ್ತ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲು ಉದ್ದೇಶಿಸಲಾಗಿದೆ.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಾಗೂ ರೋಮಿಯೊ ನಿಗ್ರಹ ಪಡೆ ಬಲಪಡಿಸುವಂತೆ ಡಿಜಿಪಿ ಎಚ್.ಸಿ.ಅವಸ್ಥಿ ಎಲ್ಲ ಪೊಲೀಸ್ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News