'ಸಾಲದ ಪ್ರಮಾಣ ಹೆಚ್ಚಿಸುವ' ಆರ್ಥಿಕ ಹೊಣೆಗಾರಿಕೆ(ತಿದ್ದುಪಡಿ) ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ

Update: 2020-09-25 18:06 GMT

ಬೆಂಗಳೂರು, ಸೆ. 25: ವಿಪಕ್ಷ ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೇ `ಸಾಲದ ಪ್ರಮಾಣ ಹೆಚ್ಚಿಸುವುದಕ್ಕೆ' ಸಂಬಂಧಿಸಿದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ-2020ಕ್ಕೆ ವಿಧಾನಸಭೆ ಧ್ವನಿಮತದ ಅನುಮೋದನೆ ನೀಡಿದೆ.

ಶುಕ್ರವಾರ ಶಾಸನ ರಚನಾ ಕಲಾಪದಲ್ಲಿ ವಿಪಕ್ಷಗಳ ಸುದೀರ್ಘ ಚರ್ಚೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕೊರೋನ ಮತ್ತು ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಕೊರತೆ ತಪ್ಪಿಸಲು ಸಾಲ ಮಾಡುವುದು ಅನಿವಾರ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗ ಮಾಡುವ ಸಾಲದ ಮೊತ್ತವನ್ನು ಬದ್ಧತಾ ವೆಚ್ಚಗಳಿಗೂ ಬಳಕೆ ಮಾಡಬೇಕಾಗುತ್ತದೆ ಎಂದು ಮಸೂದೆಯನ್ನು ಸಮರ್ಥಿಸಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಬಾಕಿ 5 ಸಾವಿರ ಕೋಟಿ ರೂ.ಗಳನ್ನು ನೀಡುವಂತೆ ಒತ್ತಾಯ ಮಾಡಲಾಗುವುದು. ಈಗ ಮಾಡಲು ಉದ್ದೇಶಿಸಿರುವ 33 ಸಾವಿರ ಕೋಟಿ ರೂ.ಸಾಲದ ಮೊತ್ತವನ್ನು 10 ವರ್ಷಗಳಲ್ಲಿ ಪಾವತಿಸುವ ಗುರಿಯನ್ನು ಹೊಂದಿದ್ದೇವೆ. ಸಾಲ ಮಾಡಿ ಜನರಿಗೆ ಹೊರೆ ಹೊರಿಸುವುದಿಲ್ಲ ಎಂದ ಅವರು, ಸಾಲ ಪಡೆಯುವ ಪ್ರಮಾಣ ಶೇ.3ರಿಂದ 5ಕ್ಕೆ ಹೆಚ್ಚಳ ಮಾಡಲು ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಬೇಕು ಎಂದು ಕೋರಿದರು.

ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ: ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಲು ಮುಂದಾಗಿದೆ. ಬದ್ಧತಾ ವೆಚ್ಚವನ್ನು ಕಡಿಮೆ ಮಾಡಿ, ಅನಗತ್ಯ ವೆಚ್ಚ, ಅನಗತ್ಯ ಹುದ್ದೆಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ಕಡಿವಾಣ ಹಾಕಬೇಕು. ಕೊರೋನ ಸಂಕಷ್ಟದಲ್ಲಿ ಶೇ.3ರಷ್ಟು ಇರುವುದನ್ನು ಶೇ.3.5ರಷ್ಟಕ್ಕೆ ಹೆಚ್ಚಳ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು.

ಎಸ್ಪಿಗಿಂತ ಮೇಲ್ಪಟ್ಟ ಅಧಿಕಾರಿಗಳ ಬಳಿ `ಆರ್ಡಲಿ' ಇರುವ ಸಿಬ್ಬಂದಿ, ನಿಗಮ ಮಂಡಳಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಅವಧಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಎರಡು ಕಡೆಗಳಲ್ಲಿ ಸೌಲಭ್ಯಗಳನ್ನು ಬಳಕೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಮೂಲಕ ಆಗುವ ಅನಗತ್ಯ ವೆಚ್ಚಕ್ಕೆ ಬ್ರೇಕ್ ಹಾಕಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಆದರೆ, ಇದಕ್ಕೆ ಸರಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಶಾಸಕರೊಂದಿಗೆ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಮಸೂದೆಗೆ ಧ್ವನಿಮತದ ಒಪ್ಪಿಗೆ ದೊರೆಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿಸಿದೆ. ಇನ್ನಾದರೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ರಾಜ್ಯ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಲಿದೆ. ನಾಲ್ಕು ಲಕ್ಷ ಕೋಟಿ ರೂ.ಗಳಷ್ಟು ದೊಡ್ಡಮಟ್ಟದ ಸಾಲದ ಕಡೆಗೆ ಹೋಗುತ್ತಿದ್ದು, ಇನ್ನಾದರೂ ಅನಗತ್ಯ ವೆಚ್ಚಕ್ಕೆ ಸರಕಾರ ಕಡಿವಾಣ ಹಾಕಬೇಕು. ಕೇಂದ್ರ ಸರಕಾರದಿಂದ ಬರಬೇಕಿರುವ ಅನುದಾನವನ್ನು ಪಡೆದುಕೊಳ್ಳಲು ಕ್ರಮ ವಹಿಸಬೇಕು

-ಸಿದ್ದರಾಮಯ್ಯ ವಿಪಕ್ಷ ನಾಯಕ

`ಜಿಎಸ್‌ಟಿಯಿಂದ ಕನಿಷ್ಟ 14 ಸಾವಿರ ಕೋಟಿ ರೂ.ಕೊರತೆಯಾಗಲಿದ್ದು, ಇದನ್ನು ಸರಿದೂಗಿಸಲು ರಾಜ್ಯ ಸಾಲ ಮಾಡಬೇಕಾದ ಸ್ಥಿತಿ ಬಂದಿದೆ. ಕೇಂದ್ರ 11,300 ಕೋಟಿ ರೂ.ಗಳನ್ನಷ್ಟೇ ಪರಿಹಾರ ಭರಿಸಲು ಒಪ್ಪಿಗೆ ನೀಡಿದೆ. ಕೇಂದ್ರದ ತೆರಿಗೆ ಪಾಲು 39 ಸಾವಿರ ಕೋಟಿ ರೂ. ಬದಲಿಗೆ 30ಸಾವಿರ ಕೋಟಿ ರೂ.ಬಂದಿದೆ. ಈ ವರ್ಷವು 28 ಸಾವಿರ ಕೋಟಿ ರೂ.ಗೆ ಇಳಿಕೆ ಯಾಗಿದ್ದು, ಒಟ್ಟು 12 ಸಾವಿರ ಕೋಟಿ ರೂ.ಗಳಷ್ಟು ಕಡಿಮೆಯಾಗಲಿದೆ. ಇದನ್ನು ಸರಿದೂಗಿಸಲು ಸಾಲ ಮಾಡಬೇಕಿದೆ. ಹೀಗಾಗಿ ಕೇಂದ್ರದಿಂದ ಹಣವನ್ನು ಪಡೆದುಕೊಳ್ಳಲು ಒತ್ತಡ ಹೇರಬೇಕು'

-ಕೃಷ್ಣ ಬೈರೇಗೌಡ, ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News