ಆರ್ಥಿಕ ದಿವಾಳಿ ತಪ್ಪಿಸಲು ಸರಕಾರ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು: ಸಿದ್ದರಾಮಯ್ಯ

Update: 2020-09-25 14:23 GMT

ಬೆಂಗಳೂರು, ಸೆ. 25: `ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಾದರೆ ರಾಜ್ಯ ಸರಕಾರ ಬದ್ಧತಾ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ದುಂದು ವೆಚ್ಚಗಳನ್ನು ನಿಲ್ಲಿಸಬೇಕು, ಅನಗತ್ಯ ಹುದ್ದೆಗಳನ್ನು ರದ್ದು ಮಾಡಬೇಕು, ತೆರಿಗೆಯೇತರ ಆದಾಯವನ್ನು ಹೆಚ್ಚಿಸಬೇಕು' ಎಂದು ವಿಧಾನಸಭೆಯ ವಿರೋಧ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ `ಕರ್ನಾಟಕ ಆರ್ಥಿಕ ಹೊಣೆಗಾರಿಕೆ(ತಿದ್ದುಪಡಿ) ವಿಧೇಯಕ-2020' ಕುರಿತು ಮಾತನಾಡಿದ ಅವರು, `ಆರ್ಥಿಕ ಶಿಸ್ತನ್ನು ಪಾಲಿಸಬೇಕು. ರಾಜ್ಯದ ಹಿತದೃಷ್ಟಿಯಿಂದ ವಿತ್ತೀಯ ಕೊರತೆಯ ಮಿತಿಯನ್ನು ಶೇ.3ರಿಂದ ಶೇ.5ಕ್ಕೆ ಏರಿಕೆ ಮಾಡುವುದು ಸರಿಯಲ್ಲ. ಹೆಚ್ಚೆಂದರೆ ಶೇ.3.5ಕ್ಕೆ ಏರಿಕೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆ ಮಾಡಬೇಕು. ಶೇ.5ಕ್ಕೆ ಏರಿಕೆ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ' ಎಂದು ಎಚ್ಚರಿಕೆ ನೀಡಿದರು.

`ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕತೆ ಅಧೋಗತಿ ತಲುಪಿದೆ ಎನ್ನುವುದನ್ನು ಸರಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್‌ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ' ಎಂದು ಅವರು ಇದೇ ವೇಳೆ ಗಮನ ಸೆಳೆದರು.

`ರಾಜ್ಯದ ಹಿತರಕ್ಷಣೆಯ ವಿಷಯದಲ್ಲಿ ರಾಜಕೀಯವನ್ನು ಎಳೆದು ತರಬಾರದು. ಬಿಜೆಪಿ ಪಕ್ಷದ ಸಂಸದರು ದಿಲ್ಲಿಯಲ್ಲಿ ಬಾಯಿ ಬಿಡುತ್ತಿಲ್ಲ. ಸರ್ವಪಕ್ಷಗಳ ನಿಯೋಗವನ್ನಾದರೂ ಕರೆದುಕೊಂಡು ಹೋದರೆ ನಾವೇ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸುತ್ತೇವೆ. ಇದರಲ್ಲಿ ರಾಜಕೀಯ ಬೇಡ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದವರು. ಅವರಿಗೆ ರಾಜ್ಯದ ಹಿತ ಬೇಕಿಲ್ಲವೇ? ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನೀವ್ಯಾಕೆ ಇದನ್ನೆಲ್ಲ ಸಹಿಸಿಕೊಂಡು ಕೂತಿದ್ದೀರಿ. ಇದರಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ, ನೀವೂ ಮಾಡಬೇಡಿ. ರಾಜ್ಯದ ಹಿತ ನಮಗೆ ಮುಖ್ಯ ಎಂದು ತಿಳಿಸಿದರು.

14ನೇ ಹಣಕಾಸು ಆಯೋಗದಲ್ಲಿ ಶೇ.4.71ರಷ್ಟಿದ್ದ ರಾಜ್ಯದ ಪಾಲನ್ನು 15ನೆ ಹಣಕಾಸು ಆಯೋಗದಲ್ಲಿ ಶೇ.3.64ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯಕ್ಕೆ 12 ಸಾವಿರ ಕೋಟಿ ರೂ.ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆಯೋಗ ಶಿಫಾರಸು ಮಾಡಿದ್ದ 5495 ಕೋಟಿ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ತಿರಸ್ಕರಿಸಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ' ಎಂದು ಸಿದ್ದರಾಮಯ್ಯ ಟೀಕಿಸಿದರು.

`2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರಕಾರ ರಾಜ್ಯಕ್ಕೆ ಜಿಎಸ್‍ಟಿ ಪರಿಹಾರವಾಗಿ 30 ಸಾವಿರ ಕೋಟಿ ರೂ. ನೀಡಬೇಕಾಗುತ್ತದೆ. ಕೇಂದ್ರ ಸರಕಾರದ ಅನ್ಯಾಯವನ್ನು ಪ್ರತಿಭಟಿಸಲಿಕ್ಕಾಗದ ಮುಖ್ಯಮಂತ್ರಿಗಳು ಜಿಎಸ್‍ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್‌ಬಿಐನಿಂದ ಸಾಲ ಪಡೆಯಲು ಹೊರಟು ರಾಜ್ಯವನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ. ಸಂವಿಧಾನದ 101ನೆ ತಿದ್ದುಪಡಿ ಮೂಲಕ ಕಾರ್ಯರೂಪಕ್ಕೆ ಬಂದಿರುವ ಜಿಎಸ್‍ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ 5 ವರ್ಷಗಳ ಕಾಲ ಜಿಎಸ್‍ಟಿ ಪರಿಹಾರ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯ. ಈ ಪರಿಹಾರದ ನಿರಾಕರಣೆ ನಮ್ಮ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

'2020-21ರ ಆಯವ್ಯಯದಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪನ್ನ 18 ಲಕ್ಷ ಕೋಟಿ ರೂ.ಎಂದು ಅಂದಾಜು ಮಾಡಲಾಗಿದೆ. ಆದರೆ ಕೊರೋನ ಹಾವಳಿ ಮತ್ತು ರಾಜ್ಯ ಸರಕಾರದ ಆರ್ಥಿಕ ಎಡವಟ್ಟುಗಳ ಕಾರಣದಿಂದ ಅದು 12 ಲಕ್ಷ ಕೋಟಿ ರೂ.ಗಳಿಗಿಂತಲೂ ಕೆಳಗಿಳಿಯಬಹುದು. ಆಗ ನಮ್ಮ ಸಾಲದ ಸಾಮರ್ಥ್ಯವೂ ಕಡಿಮೆಯಾಗಲಿದೆ. ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ನಮ್ಮ ಸಾಲ ಶೇ.25ರ ಮಿತಿಯಲ್ಲಿರಬೇಕಾಗುತ್ತದೆ. ನಾನೆಂದೂ ಈ ಮಿತಿಯನ್ನು ಮೀರಿರಲಿಲ್ಲ. ಆದರೆ ಬಿಎಸ್‍ವೈ ಸರಕಾರ 53 ಸಾವಿರ ಕೋಟಿ ರೂ.ಸಾಲ ಮಾಡಿದೆ, ಈಗ ಹೆಚ್ಚುವರಿಯಾಗಿ 33 ಸಾವಿರ ಕೋಟಿ ರೂ.ಸಾಲ ಎತ್ತಲು ಹೊರಟಿದೆ. ಈ ಒಟ್ಟು ಸಾಲ ಖಂಡಿತ ಶೇ.25ರ ಮಿತಿಯನ್ನು ಮೀರಲಿದೆ' ಎಂದು ಎಚ್ಚರಿಕೆ ನೀಡಿದರು.

ದಿವಾಳಿ: ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಆಯವ್ಯಯ ಪತ್ರಗಳಲ್ಲಿ ವಿತ್ತೀಯ ಕೊರತೆ ಎಂದೂ ಶೇ.ಮೂರರ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್‍ನಲ್ಲಿ ಈ ಮಿತಿ ಶೇ.2.49ರಷ್ಟಿತ್ತು. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯ. ಯಡಿಯೂರಪ್ಪ ಸರಕಾರ ರಾಜ್ಯವನ್ನು ಆರ್ಥಿಕ ದಿವಾಳಿಗೆ ತಳ್ಳುತ್ತಿದೆ. ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ(ಜಿಎಸ್‍ಡಿಪಿ) ಶೇ.3ರಷ್ಟನ್ನು ಮೀರಬಾರದು ಎಂದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಯಡಿಯೂರಪ್ಪ ಸರಕಾರ ಈ ಮಿತಿಯನ್ನು ಶೇ.5ಕ್ಕೆ ಹೆಚ್ಚಿಸಲು ಹೊರಟಿರುವುದು ರಾಜ್ಯದ ಆರ್ಥಿಕತೆಗೆ ಮಾರಣಾಂತಿಕ ಹೊಡೆತ' ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯವನ್ನು ಆರ್ಥಿಕ ದಿವಾಳಿಯಿಂದ ತಪ್ಪಿಸಲು ಸರಕಾರ ಕೂಡಲೇ ಅನಗತ್ಯ ವೆಚ್ಚ ತಗ್ಗಿಸಲು ವಿವಿಧ ಇಲಾಖೆಗಳಲ್ಲಿ ಅನಗತ್ಯ ಹುದ್ದೆಗಳನ್ನು ರದ್ದುಪಡಿಸುವುದರ ಜೊತೆಗೆ ಅನಗತ್ಯ ವೆಚ್ಚಕ್ಕೂ ಕಡಿವಾಣ ಹಾಕಲು ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳಬೇಕು. ಒಟ್ಟಾರೆ ಆದಾಯದಲ್ಲಿ ಶೇ.50ರಷ್ಟು ಸರಕಾರಿ ನೌಕರರಿಗೆ ವೇತನ, ಭತ್ತೆ ಮತ್ತು ಪಿಂಚಣಿಗೆ ವೆಚ್ಚ ವಾಗುತ್ತದೆ. ಇದನ್ನು ಕಡಿಮೆ ಮಾಡಲು ಸರಕಾರ ಅನಗತ್ಯ ವೆಚ್ಚ ಮತ್ತು ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಬೇಕು'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News