ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ನಡುವೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕಕ್ಕೆ ಅನುಮೋದನೆ

Update: 2020-09-26 13:40 GMT

ಬೆಂಗಳೂರು, ಸೆ.26: ಕಾಂಗ್ರೆಸ್-ಜೆಡಿಎಸ್ ಸದಸ್ಯರ ವಿರೋಧ, ಸಭಾತ್ಯಾಗದ ನಡುವೆ ವಿವಾದಿತ 2020ನೆ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ಲಭಿಸಿತು.

ಶನಿವಾರ ಭೋಜನ ವಿರಾಮದ ಬಳಿಕ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಡಿಸಿದ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ ರಾಜ್ಯದ ವಿಷಯ. ರೈತರ ಒತ್ತಾಯದಿಂದ ಮಾಡಿದ ತಿದ್ದುಪಡಿಯಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಚೇರಿಯಿಂದ ಬಂದ ಪತ್ರದ ಆಧರದ ಮೇಲೆ ಈ ತಿದ್ದುಪಡಿ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಮೇಲೆ ಕಾರ್ಪೋರೇಟ್ ವಲಯ, ಎಂಎನ್‍ಸಿಗಳು ಒತ್ತಡ ಹೇರಿದ್ದಾರೆ. ಆದುದರಿಂದ, ರಾಜ್ಯ ಸರಕಾರಗಳಿಗೆ ಅವರು ನಿರ್ದೇಶನ ನೀಡುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ರಾಜ್ಯದ ವಿಷಯಗಳ ಮೇಲೆ ಕೇಂದ್ರದ ಸವಾರಿ ಮಾಡಲು ನೀವು ಯಾಕೆ ಒಪ್ಪಿಗೆ ನೀಡುತ್ತೀರಾ ಎಂದು ಅವರು ಪ್ರಶ್ನಿಸಿದರು.

ಡಿಕ್ಟೇರ್‍ಶಿಪ್ ನಡೆಯುತ್ತಿದ್ದೆಯೆ, ರಾಜ್ಯದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಕೇಂದ್ರಕ್ಕೆ ಅಧಿಕಾರ ಕೊಟ್ಟಿದ್ದು ಯಾರು? 2017ರಲ್ಲಿ ನಾವು ಈ ವಿಧೇಯಕವನ್ನು ವಿರೋಧಿಸಿದ್ದೇವೆ. ಜಿಎಸ್‍ಟಿ ಮಾರಾಟ ತೆರಿಗೆ ರಾಜ್ಯಕ್ಕೆ ಸೇರಿದ್ದು, ಕೇಂದ್ರದವರು ಪರಿಹಾರ ಕೊಡುತ್ತೇವೆ ಎಂದರು, ನಾವು ಒಪ್ಪಿದೆವು. ಇವತ್ತು ಪರಿಸ್ಥಿತಿ ಏನಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವಿಧೇಯಕ ಜಾರಿಯಾದ ನಂತರ ಎಪಿಎಂಸಿಗಳು ಮುಚ್ಚಿಹೋಗುತ್ತವೆ. ಆನಂತರ ಬಂಡವಾಳಶಾಹಿಗಳು ಅವರದ್ದೇ ಆದ ಮಾರುಕಟ್ಟೆಗಳನ್ನು ಮಾಡಿಕೊಳ್ಳುತ್ತೇವೆ. ಆಗ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆಯೇ? ರೈತರ ಮೇಲೆ ಅವರು ಸವಾರಿ ಮಾಡುತ್ತಾರೆ. ರೈತರ ಜುಟ್ಟು ಖಾಸಗಿಯವರಿಗೆ ಯಾಕೆ ಕೊಡುತ್ತೀರಾ? ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು, ತೂಕ ಸರಿಯಾಗಿ ಇರಬೇಕು, ಎಂಎಸ್‍ಪಿ ಹೆಚ್ಚು ಮಾಡುತ್ತೇವೆ. ಇದನ್ನು ಖಾಸಗಿಯವರಿಂದ ನಿರೀಕ್ಷೆ ಮಾಡಲು ಸಾಧ್ಯವೆ. ಎಪಿಎಂಸಿಗಳಿಗೆ ವರ್ಷಕ್ಕೆ 600 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಬರುತ್ತದೆ. ಮಾರುಕಟ್ಟೆ ಮುಚ್ಚಿಹೋದ ಬಳಿಕ ಸರಕಾರಕ್ಕೆ ಇದು ಸಿಗುತ್ತದೆಯೆ? ಎಂದು ಅವರು ಪ್ರಶ್ನಿಸಿದರು.

2015ರಲ್ಲಿ ಮಹದೇವಪ್ರಸಾದ್ ಸಹಕಾರ ಸಚಿವರಾಗಿದ್ದಾಗ ಎಪಿಎಂಸಿಗಳಲ್ಲಿ ಇ-ಟ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದೆವು. ನಮ್ಮ ಯೋಜನೆಯನ್ನು ಕೇಂದ್ರ ಸರಕಾರ ಮೆಚ್ಚಿ, ಇಡೀ ದೇಶಕ್ಕೆ ವಿಸ್ತರಿಸಿತು. ರೈತರಿಗೆ ನೆರವು ನೀಡಲೇಬೇಕು ಅನ್ನೋ ಮನಸ್ಸು ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತನ್ನಿ, ರೈತರು ಬೆಳೆಯುವ ಬೆಳೆಗಳಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ನೀಡಿ. ಈ ವಿಧೇಯಕ ರೈತರ ಪಾಲಿಗೆ ಮರಣ ಶಾಸನ. ಇದನ್ನು ಕೈ ಬಿಡಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರಕಾರ ರಾಜ್ಯ ಸರಕಾರಗಳ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯ ಸರಕಾರ ಜಿಎಸ್‍ಟಿಗೆ ಒಪ್ಪಿಗೆ ನೀಡುವಾಗಲೆ ಹೇಳಿದ್ದೆ ಇದು ‘ನಮ್ಮ ಕುತ್ತಿಗೆ ಅವರ ಕೈಗೆ ನೀಡಿ, ಹಗ್ಗನೂ ಕೊಟ್ಟು, ನೇಣು ಹಾಕಿಸಿಕೊಳ್ಳುವಂತಾಗಿದೆ’ ಎಂದು. ಅದೇ ರೀತಿ ಈ ವಿಧೇಯಕವು ರೈತರ ಪಾಲಿಗೆ ಕಂಟಕವಾಗಲಿದೆ ಎಂದರು.

ಬಿಹಾರದಲ್ಲಿ ಎಪಿಎಂಸಿಗಳನ್ನು ರದ್ದು ಮಾಡಿದ ನಂತರ, ಅಲ್ಲಿನ ರೈತರು ಹರಿಯಾಣ, ಪಂಜಾಬ್‍ನಲ್ಲಿ ಹೋಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಪರಿಸ್ಥಿತಿಯಿದೆ. ರೈತರು ಬೆಳೆಯುವಂತಹ ಬೆಳಗಳ ಪೈಕಿ ಶೇ.6ರಷ್ಟು ಮಾತ್ರ ಎಂಎಸ್‍ಪಿ ಆಧಾರದಲ್ಲಿ ಖರೀದಿ ಮಾಡುತ್ತೇವೆ. ಉಳಿದ ಶೇ.94ರಷ್ಟು ಬೆಳೆ ಹೊರಗೆ ಮಾರಾಟ ಮಾಡುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಎಪಿಎಂಸಿಗಳಲ್ಲಿ ಸೆಸ್ ಸಂಗ್ರಹ ಕಡಿಮೆ ಮಾಡಿದರೆ, ಮೂಲಭೂತ ಸೌಕರ್ಯ ವೃದ್ಧಿಸಲು ಸಾಧ್ಯವಿಲ್ಲ. ಅಲ್ಲಿನ ಸಿಬ್ಬಂದಿಗಳಿಗೆ ಸಂಬಳ ಕೊಡಲು ಸಾಧ್ಯವಾಗುವುದಿಲ್ಲ. ಇವರೆಲ್ಲ ರೈತರನ್ನು ಉದ್ಧಾರ ಮಾಡಲು ಬಂದಿರುವ ಕಂಪೆನಿಗಳಲ್ಲ. ಯಾವ ರೈತನು ತಾನು ಬೆಳೆ ಬೆಳೆಯುವ ಮುನ್ನ ಕಾರ್ಪೋರೇಟ್ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಇದಾಗಿದೆ. ದುಡುಕಿ ತೀರ್ಮಾನ ಮಾಡಬೇಡಿ ಎಂದು ಅವರು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಕೇಂದ್ರ ಸರಕಾರದ ಅಧಿಕಾರಿಗಳು, ಕೃಷಿ ಸಚಿವರು ಮಾದರಿ ಎಪಿಎಂಸಿ ಕಾಯ್ದೆಗೆ ಒಪ್ಪಿಗೆ ಪಡೆದು ಕಳುಹಿಸಿಕೊಡಿ ಎಂದು ನಮಗೆ ಕೇಳಿದರು. ಆದರೆ, ರಾಜ್ಯದ ಹಿತದೃಷ್ಟಿಯಿಂದ ನಾವು ಅವರಿಗೆ ಸ್ಪಷ್ಟೀಕರಣ ಕೊಟಿದ್ದೇವೆಯೆ ಹೊರತು, ಅಂಗೀಕಾರ ಪಡೆಯಲು ಹೋಗಿಲ್ಲ. 162 ಎಪಿಎಂಸಿಗಳಿವೆ. ಹೋಬಳಿ ಮಟ್ಟದಲ್ಲಿ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ನಬಾರ್ಡ್ ಮೂಲಕ 300 ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದರು.

ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಮಾತನಾಡಿ, 2010ರಲ್ಲಿ ಬಿಹಾರದಲ್ಲಿ ಇದೇ ರೀತಿ ಎಪಿಎಂಸಿಗಳನ್ನು ಮುಕ್ತ ಮಾಡಿದರು. ಆದರೆ, ಇವತ್ತು ರೈತರು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಕೂಲಿ ಕಾರ್ಮಿಕರನ್ನಾಗಿ ಮಾಡುವ ಪ್ರಯತ್ನ ಈ ವಿಧೇಯಕದಲ್ಲಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ 162 ಎಪಿಎಂಸಿಗಳಿದ್ದು, ರೈತರು ಬೆಳೆದ ಬೆಳೆಗಳನ್ನು ಎಪಿಎಂಸಿ ಒಳಗಡೆ ಮಾರಾಟ ಮಾಡುವ ಕಾನೂನು ಜಾರಿಯಲ್ಲಿದೆ. ಅದಕ್ಕೆ ತಿದ್ದುಪಡಿ ತಂದು ಎಪಿಎಂಸಿ ಒಳಗಡೆ ಹಾಗೂ ಹೊರಗೆ, ಹೊಲದಲ್ಲಿ ಬೆಳೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆದಂತಹ ಬೆಳೆ ಅವರ ಹಕ್ಕು. ಅವರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅಲ್ಲದೆ, ಎಪಿಎಂಸಿ ಹೊರಗಡೆ ಉತ್ಪನ್ನ ಮಾರಾಟ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ದಂಡ ಹಾಕುವ ನಿಯಮವನ್ನು ಕೈ ಬಿಡುತ್ತಿದ್ದೇವೆ. ರೈತ ಮುಖಂಡರು, ಮಾಜಿ ಸಹಕಾರ ಸಚಿವರು, ಇತರ ಮುಖಂಡರ ಜೊತೆ ಮುಖ್ಯಮಂತ್ರಿ ಚರ್ಚಿಸಿ, ಈ ತಿದ್ದುಪಡಿ ತರಲಾಗಿದೆ. ರೈತರಿಗೆ ಇದರಿಂದ ಯಾವುದೆ ಅನ್ಯಾಯವಾಗುವುದಿಲ್ಲ.

ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ

2020ನೆ ಸಾಲಿನ ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ವಿಧೇಯಕ ಹಾಗೂ 2020ನೆ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ(ನಾಲ್ಕನೆ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News