ವಿಪಕ್ಷಗಳ ಸಭಾತ್ಯಾಗದ ನಡುವೆ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಅಂಗೀಕಾರ

Update: 2020-09-26 15:08 GMT

ಬೆಂಗಳೂರು, ಸೆ.26: ವಿಪಕ್ಷಗಳ ಸಭಾತ್ಯಾಗದ ನಡುವೆಯೂ ಸಾಲ ಪಡೆಯುವ ಸಂಬಂಧದ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ’ಕ್ಕೆ ಶನಿವಾರ ವಿಧಾನಪರಿಷತ್‍ನಲ್ಲಿ ಅನುಮೋದನೆ ದೊರೆಯಿತು.

ಶನಿವಾರ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕೈಗೆತ್ತಿಕೊಂಡಿದ್ದ ಹಣಕಾಸಿಗೆ ಸಂಬಂಧಿಸಿದ ವಿಧೇಯಕಗಳ ಚರ್ಚೆ ನಡೆಯಿತು. ಈ ವೇಳೆ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿಯು ಸುದೀರ್ಘವಾದ ಚರ್ಚೆ ನಡೆದು, ವಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು. ಕೊನೆಗೆ ವಿಪಕ್ಷಗಳು ವಿಧೇಯಕವನ್ನು ಖಂಡಿಸಿ ಸಭಾತ್ಯಾಗ ಮಾಡಿದ್ದರಿಂದ ಸಭಾಪತಿ ಧ್ವನಿಮತದ ಮೂಲಕ ಅನುಮೋದಿಸಿದರು.

ಕೊರೋನ ಹಾವಳಿಯಿಂದ ಸರಕಾರ ನಿರೀಕ್ಷಿತ ಆದಾಯ 1.79 ಕೋಟಿಗೆ ಬದಲಾಗಿ 1.14 ಕೋಟಿ ರೂ. ಮಾತ್ರ ಬಂದಿದೆ. ಸರಿ ಸುಮಾರು 65 ಸಾವಿರ ಕೋಟಿ ರೂ. ಖೋತಾ ಆಗಿದೆ. ಈ ಕೊರತೆ ಸರಿದೂಗಿಸಲು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ(ಜಿಎಸ್‍ಡಿಪಿ)ವನ್ನು ಶೇ. 3ರಿಂದ ಶೇ. 5ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಇದರಿಂದ ಸುಮಾರು 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸಾಧ್ಯವಾಗುತ್ತದೆ. ಸಾಲ ಮರುಪಾವತಿಗೆ ಹತ್ತು ವರ್ಷಗಳ ಕಾಲಾವಕಾಶ ಇರಲಿದೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸಾಲದ ಪ್ರಮಾಣ ನಾಲ್ಕು ಲಕ್ಷ ಕೋಟಿ ರೂ. ಆಗಲಿದೆ. ಆಡಳಿತ ಮುನ್ನಡೆಸಲು ಹಾಗೂ ಅಗತ್ಯ ಕಾರ್ಯಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡ ಆಗಿದೆ ಎಂದು ಸಚಿವರು ಸದನಕ್ಕೆ ವಿವರಿಸಿದರು.

ಹೆಚ್ಚು ಸಾಲದ ಪರಿಹಾರ ಸಲ್ಲ; ಪ್ರತಿಪಕ್ಷ

ಸರಕಾರ ಮಂಡಿಸಿದ ವಿಧೇಯಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಅಧಿಕ ಸಾಲ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಷ್ಟಕ್ಕೂ ಸಾಲದ ಪ್ರಮಾಣ ಹೆಚ್ಚಿಸುವ ಬದಲಿಗೆ ಬಾಕಿ ಉಳಿಸಿಕೊಂಡಿರುವ ರಾಜ್ಯದ ಜಿಎಸ್‍ಟಿ ಹಣ ಪಾವತಿಸುವಂತೆ ಕೇಂದ್ರದ ಮೇಲೆ ಒತ್ತಡ ತರುವುದು ಹೆಚ್ಚು ಸೂಕ್ತ. ಬಿಹಾರ, ಗುಜರಾತಿಗೆ ನೀಡಿದಂತೆ ನಮ್ಮ ಬಾಕಿ ಹಣ ನೀಡುವ ಸಂಬಂಧ ಯಾಕೆ ಕೇಂದ್ರದ ಮನವೊಲಿಸಬಾರದು ಎಂದು ಒಕ್ಕೊರಲ ಒತ್ತಾಯ ಕೇಳಿಬಂತು.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಿದೆ ಸರಕಾರದ ಲೆಕ್ಕಾಚಾರ. ಜಿಎಸ್‍ಟಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಹಣ ಸೇರಿದೆ. ಅದನ್ನು ರಾಜ್ಯ ಸರ್ಕಾರ ಕೇಳಬೇಕು. ಸಾಲದಿಂದ ಸಾಮಾನ್ಯರ ಮೇಲೆ ಹೊರೆ ಬೀಳಲಿದೆ ಎಂದರು.

ಇವರ ಮಾತಿಗೆ ಧ್ವನಿಗೂಡಿಸಿದ ಸದಸ್ಯ ಮರಿತಿಬ್ಬೇಗೌಡ, `ಕೇಂದ್ರದ ಮಲತಾಯಿ ಧೋರಣೆ ಸರಿ ಅಲ್ಲ. ಬೇಕಿದ್ದರೆ ನಿಯೋಗ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹಾಕೋಣ' ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಜಿಎಸ್‍ಡಿಪಿ ಶೇ. 3ರಿಂದ 4ಕ್ಕೆ ಹೆಚ್ಚಿಸಬೇಕು. ಸಾಲದ ಪ್ರಮಾಣ ಅಧಿಕಗೊಳಿಸುವುದರಿಂದ ಜನರಿಗೆ ಹೊರೆ ಆಗಲಿದೆ. ಆರ್ಥಿಕ ದಿವಾಳಿಗೂ ಕಾರಣವಾಗಬಹುದು ಎಂದು ತಿಳಿಸಿದರು.

ಸದಸ್ಯ ಪ್ರಕಾಶ ರಾಠೋಡ್ ಮಾತನಾಡಿ, ಕೇಂದ್ರದ ಈ ಕ್ರಮದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ರಾಜ್ಯದ ಈಗಿನ ಆರ್ಥಿಕ ಸಂಕಷ್ಟದ ಸ್ಥಿತಿಗೆ ಕೇಂದ್ರವೇ ಹೊಣೆ. ಈ ಸಂಬಂಧ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

`ಜಿಎಸ್‍ಟಿ ಬಾಕಿಗೆ ಸಂಬಂಧ ಇಲ್ಲ': ಕೇಂದ್ರದಿಂದ ಒಟ್ಟಾರೆ 24-25 ಸಾವಿರ ಕೋಟಿ ಪೈಕಿ 7 ಸಾವಿರ ಕೋಟಿ ಬಂದಿದೆ. 11 ಸಾವಿರ ಕೋಟಿ ರೂ. ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಿದ್ದು, ಇದರ ಹೊಣೆಗಾರಿಕೆಯನ್ನು ಸ್ವತಃ ಕೇಂದ್ರ ಹೊರಲಿದ್ದು, ಈ ಸಂಬಂಧ ಒಪ್ಪಂದ ಕೂಡ ಆಗಿದೆ. ಉಳಿದ ಏಳು ಸಾವಿರ ಕೋಟಿ ರೂ. ಹಂತ-ಹಂತವಾಗಿ ಬಿಡುಗಡೆ ಮಾಡುವ ಭರವಸೆ ನೀಡಿದೆ. ಹೀಗಾಗಿ, ಕೇಂದ್ರದ ಜಿಎಸ್‍ಟಿಗೂ ಈ ತಿದ್ದುಪಡಿಗೂ ಸಂಬಂಧ ಇಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಆದಾಯ ನಿರೀಕ್ಷೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಆರ್ಥಿಕ ಚೇತರಿಕೆಗೆ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳಲಾಗುತ್ತಿದೆ. ಅಷ್ಟಕ್ಕೂ ಇದು ಕೇವಲ ಪ್ರಸಕ್ತ ಸಾಲಿಗೆ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಈ ವಾದ ನಿರಾಕರಿಸಿದ ಪ್ರತಿಪಕ್ಷ ಸದಸ್ಯರು, ಜಿಎಸ್‍ಡಿಪಿ ಅನ್ನು ಶೇ. 4ಕ್ಕೆ ಸೀಮಿತಗೊಳಿಸುವಂತೆ ಒತ್ತಾಯಿಸಿದರು. ಒಪ್ಪದಿದ್ದಾಗ ಸಭಾತ್ಯಾಗ ಮಾಡಿದರು. ಅಂತಿಮವಾಗಿ ಸಭಾಪತಿ ಪ್ರತಾಪ್‍ ಚಂದ್ರ ಶೆಟ್ಟಿ ವಿಧೇಯಕ ಅಂಗೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News