ರೈತರ ತಟ್ಟೆಯಿಂದ ಅನ್ನ ಕದಿಯುವ ಕೃಷಿ ಮಸೂದೆಗಳು: ಸುದ್ಧಿಸಂಸ್ಥೆಯ ವರದಿ

Update: 2020-09-26 17:35 GMT

ಹೊಸದಿಲ್ಲಿ, ಸೆ.26: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ಆದರೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕಿರುವ ವಿವಾದಾತ್ಮಕ ಕೃಷಿ ಮಸೂದೆ ರೈತರಿಗೆ ಅನುಕೂಲಕರ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ, ಇದಕ್ಕೆ ರೈತ ಸಮುದಾಯದಿಂದಲೇ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿರುವುದು ಗಮನಾರ್ಹವಾಗಿದೆ ಎಂದು ಸುದ್ಧಿಸಂಸ್ಥೆಯೊಂದು ವರದಿ ಮಾಡಿದೆ. ಕೇಂದ್ರ ಸರಕಾರದ ಮೂರು ಕೃಷಿ ಮಸೂದೆಗಳು ರೈತರ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಗೆ ತಲುಪಿಸಲು ನೆರವಾಗಲಿವೆ ಎನ್ನಲಾಗಿದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಮೂಲಕ ರೈತರ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ತಲುಪಿಸಲು ಈ ಮಸೂದೆ ನೆರವಾಗಲಿದೆ ಎಂದು ಸರಕಾರ ಹೇಳುತ್ತಿದೆ. ಎಪಿಎಂಸಿಯ ಹೊರಗಡೆ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತದೆ. ಇದರಿಂದ ಪೂರ್ವನಿರ್ಧರಿತ ಬೆಲೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಧಾನ್ಯಗಳು, ಖಾದ್ಯ ತೈಲ, ಈರುಳ್ಳಿ, ಬಟಾಟೆ ಮುಂತಾದವುಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇದರರ್ಥ, ಈ ಉತ್ಪನ್ನಗಳು ಬೆಲೆ ನಿಯಂತ್ರಣದ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಅಲ್ಲದೆ ಅಸಾಧಾರಣ ಪರಿಸ್ಥಿತಿ ಹೊರತುಪಡಿಸಿ, ಖಾಸಗಿ ಸಂಸ್ಥೆಗಳು ಕೃಷಿ ಉತ್ಪನ್ನಗಳನ್ನು ದಾಸ್ತಾನು ಇರಿಸಲು ವಿಧಿಸಿದ್ದ ಮಿತಿಯನ್ನು ರದ್ದುಗೊಳಿಸಲಾಗಿದೆ. ಈಗ ರೈತರು ಕಮಿಷನ್ ಏಜೆಂಟರ ಮೂಲಕ ತಮ್ಮ ಉತ್ಪನ್ನಗಳನ್ನು ಎಪಿಎಂಸಿಗೆ ಮಾರುತ್ತಿದ್ದಾರೆ. ಆದರೆ ನೂತನ ಮಸೂದೆಯ ಬಳಿಕ ಕಮಿಷನ್ ಏಜೆಂಟರು ಹಾಗೂ ಎಪಿಎಂಸಿಗಳ ಮಹತ್ವ ಕಡಿಮೆಯಾಗುತ್ತದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಲಭಿಸಲು ಸರಕಾರ ಘೋಷಿಸುವ ಕನಿಷ್ಠ ಬೆಂಬಲ ಬೆಲೆಯ ಯುಗ ಅಂತ್ಯವಾಗಲಿದೆ. 2014ರಲ್ಲಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬೆಂಬಲ ಬೆಲೆಯನ್ನು ಕೃಷಿ ವೆಚ್ಚದ 50% ಶೇ. ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ, ಗೆದ್ದ ಬಳಿಕ ಈ ಭರವಸೆಯನ್ನು ಮರೆತೇ ಬಿಟ್ಟಿರುವುದು ವಿಪರ್ಯಾಸಕರವಾಗಿದೆ. ಈಗ ಕೇಂದ್ರ ಸರಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯ ಆಶ್ವಾಸನೆಯನ್ನೂ ಮುಂದಿನ ದಿನ ಕಡೆಗಣಿಸುವ ಸಾಧ್ಯತೆಯೇ ಹೆಚ್ಚು ಎಂದು ರೈತರು ಅಭಿಪ್ರಾಯ ಪಡುತ್ತಾರೆ. ಕೃಷಿ ಉತ್ಪನ್ನಗಳ ದಾಸ್ತಾನು ಮಿತಿಯನ್ನು ಕೊನೆಗೊಳಿಸುವ ನಿರ್ಧಾರ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲಕರವಾಗಿದ್ದು ಅವರು ತಮಗಿಷ್ಟ ಬಂದಂತೆ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆ ಎಂದು ಸರಕಾರ ಹೇಳಿದ್ದರೂ ದೊಡ್ಡ ರೈತರು ಮತ್ತು ಸಣ್ಣ ರೈತರ ಮಧ್ಯೆ ಯಾವುದೇ ವ್ಯತ್ಯಾಸವನ್ನು ಉಲ್ಲೇಖಿಸಿಲ್ಲ. ಸಣ್ಣ ಮತ್ತು ಅತೀ ಸಣ್ಣ ಕೃಷಿಕರು ದೊಡ್ಡ ರೈತರೆದುರು ಪೈಪೋಟಿ ನೀಡಲು ಸಾಧ್ಯವಾಗದು. ಸರಕಾರ ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿದೆ . ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವುದರಿಂದ ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ತೊಂದರೆಯಾಗಲಿದೆ. ಆಗ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಂದ ಆಹಾರವನ್ನು ಪಡೆದು ಸಾರ್ವಜನಿಕ ವಿತರಣೆಗೆ ಒದಗಿಸಬೇಕಾಗುತ್ತದೆ. ಅಲ್ಲದೆ ಮೂಲ ಆಹಾರ ವಸ್ತುಗಳ ಬೆಲೆಯ ಮೇಲೆಯೂ ಇದರಿಂದ ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತವಾಗಿದೆ.

ಈಗ ಚಾಲ್ತಿಯಲ್ಲಿರುವ, ಎಪಿಎಂಸಿ ಮೂಲಕ ರೈತರ ಉತ್ಪನ್ನಗಳ ಖರೀದಿ, ಮಾರಾಟ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ರೈತರಿಗೆ ಸೂಕ್ತ ಬೆಂಬಲ ಬೆಲೆ(ಅದು ಅವರ ಹಕ್ಕು, ಅವರಿಗೆ ಮಾಡುವ ಔದಾರ್ಯವಲ್ಲ) ಒದಗಿಸಬೇಕು. ದಶಕಗಳಿಂದ ನಗರವಾಸಿಗಳಿಗೆ ಗ್ರಾಮೀಣ ಜನರು ನೆರವಾಗುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಮೂಲಕ ರೈತರು ದೇಶಕ್ಕೆ ಸಲ್ಲಿಸುವ ಮಹಾನ್ ಸೇವೆಗೆ ದೇಶದ ಕಡೆಯಿಂದ ಕಿಂಚಿತ್ತಾದರೂ ಕೃತಜ್ಞತೆ ಸಲ್ಲಬೇಕಿದೆ ಎಂದು ಸುದ್ಧಿಸಂಸ್ಥೆಯ ವರದಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News