ಲಾಕ್‍ಡೌನ್ ಬಳಿಕ ಕುಗ್ಗಿದ ವ್ಯಾಪಾರ: ರಾಜಧಾನಿ ಬೆಂಗಳೂರಿನಲ್ಲಿ ಮಾರಾಟಕ್ಕಿವೆ ಅಂಗಡಿಗಳು !

Update: 2020-09-28 04:35 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.27: ಕೊರೋನ ಸೋಂಕು ಹಿನ್ನೆಲೆ ಕೇಂದ್ರ ಸರಕಾರ ಜಾರಿಗೊಳಿಸಿದ್ದ ಲಾಕ್‍ಡೌನ್ ಬಳಿಕವೂ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಕುಗ್ಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸರಕುಗಳ ಸಮೇತ ನೂರಾರು ಅಂಗಡಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ದಿನಸಿ ಸಾಮಗ್ರಿ ಅಂಗಡಿಗಳು, ತಿಂಡಿ-ತಿನಿಸು ಹಾಗೂ ಜವಳಿ ಮಳಿಗೆ, ಹೋಟೆಲ್‍ಗಳು ಸೇರಿದಂತೆ ನೂರಾರು ಮಳಿಗೆಗಳಲ್ಲಿನ ಸರಕುಗಳ ಸಮೇತ ಮಾಲಕರು ಮಾರಾಟಕ್ಕೆ ಮುಂದಾಗಿದ್ದು, ಗಿರಾಕಿಗಳಿಗಾಗಿ ಕಾಯುತ್ತಿದ್ದಾರೆ. ಲಾಕ್‍ಡೌನ್ ನಂತರವೂ ವ್ಯಾಪಾರ ವಹಿವಾಟು ಕುಗ್ಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಮುಖ್ಯವಾಗಿ ವ್ಯಾಪಾರ ಪ್ರದೇಶ ಎಂದೇ ಗುರುತಿಸಿಕೊಂಡಿದ್ದ ಎಂಜಿ ರಸ್ತೆ, ಕೋರಮಂಗಲ, ಶಿವಾಜಿನಗರ, ಶಾಂತಿನಗರ, ವಿಜಯನಗರ, ಕಮ್ಮನಹಳ್ಳಿ, ಯಲಹಂಕ, ಯಶವಂತಪುರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಅಂಗಡಿಗಳನ್ನು ಮಾರಾಟ ಮಾಡಲು ಮಾಲಕರು ಮುಂದಾಗಿದ್ದಾರೆ.

10 ಲಕ್ಷದೊಳಗಿರುವವರೇ ಹೆಚ್ಚು: ನಗರದಲ್ಲಿ 10 ಲಕ್ಷ ರೂ.ವರೆಗೂ ಹೂಡಿಕೆ ಮಾಡಿ, ವ್ಯಾಪಾರ ನಡೆಸುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಳಿಗೆಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ. ಇನ್ನು, ಬೇಕರಿ, ಹೋಟೆಲ್, ಜವಳಿ, ದಿನಸಿ ಅಂಗಡಿಗಳ ಮಾಲಕರೇ ಅಧಿಕವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಪ್ರಶ್ನಿಸಿದರೆ, ಜನರೇ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

3 ಸಾವಿರ ಅಂಗಡಿ ಮಾರಾಟ?: ಅನ್‍ಲಾಕ್ ಬಳಿಕ ವ್ಯಾಪಾರ ಹಂತ ಹಂತವಾಗಿ ಪ್ರಗತಿ ಸಾಧಿಸಲಿದೆ ಎಂದು ಮಾಲಕರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದ್ದು, ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿಯೇ ಸುಮಾರು 3 ಸಾವಿರಕ್ಕೂ ಅಧಿಕ ಅಂಗಡಿಗಳನ್ನು ಸರಕುಗಳ ಸಮೇತ ಮಾರಾಟಕ್ಕೆ ಇಡಲಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಓಎಲ್‍ಎಕ್ಸ್‍ ನಲ್ಲೂ ಮಾರಾಟದ ಜಾಹೀರಾತುಗಳನ್ನು ನೀಡಲಾಗಿದೆ.

ಬಾಡಿಗೆ ಹೆಚ್ಚಳ: ಮೊದಲಿನಂತೆ ನಿರೀಕ್ಷೆಯ ಮಟ್ಟದಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಆದರೆ, ಕಟ್ಟಡದ ಮಾಲಕರು ಬಾಡಿಗೆ ಕೇಳುತ್ತಾರೆ. ಖರ್ಚು-ವೆಚ್ಚವೆಲ್ಲ ಯಥಾ ರೀತಿ ಇದೆ. ನಷ್ಟ ಅನುಭವಿಸಿ ಇಲ್ಲಿ ಇರಬೇಕಾದ ಸ್ಥಿತಿಯಲ್ಲಿ ನಾವು ಇಲ್ಲ. ಹೀಗಾಗಿಯೇ, ಅಂಗಡಿ ಮಾರಾಟ ಮಾಡಿ ಊರಿಗೆ ತೆರಳುತ್ತೇನೆ ಎನ್ನುತ್ತಾರೆ ಇಲ್ಲಿನ ಬನಶಂಕರಿಯ ಮುಖ್ಯ ರಸ್ತೆಯಲ್ಲಿ ಬೇಕರಿ ವ್ಯಾಪಾರಿ ಆಗಿರುವ ಸುರೇಶ್.

ಕಾರ್ಮಿಕರು ಇಲ್ಲ: ಲಾಕ್‍ಡೌನ್ ಪರಿಣಾಮ ನಾವೇ ಕಾರ್ಮಿಕರನ್ನು ಊರಿಗೆ ತೆರಳಲು ಹೇಳಿದ್ದೆವು. ಈಗ, ಅವರು ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಇಲ್ಲದೆ, ಹೋಟೆಲ್ ನಡೆಸುವುದು ಕಷ್ಟಕರ. ಹೀಗಾಗಿ, ಮಾರಾಟಕ್ಕೆ ಮುಂದಾಗಿದ್ದೇನೆ ಎಂದು ತನ್ನ ಹೋಟೆಲ್ ಅನ್ನು 6 ಲಕ್ಷ ರೂ.ಗಳಿಗೆ ಮಾರಾಟಕ್ಕೆ ಇಟ್ಟಿರುವ ಭುವನೇಶ್ವರಿ ನಗರದ ಕರ್ನಾಟಕ ಟಿಫನ್ ಸೆಂಟರ್ ಮಾಲಕರು ಪ್ರತಿಕ್ರಿಯಿಸಿದರು.

ಜನರು ಬರುತ್ತಿಲ್ಲ: ಕಳೆದ ಮೂರು ವರ್ಷಗಳ ಹಿಂದೆಯಷ್ಟು ನಗರದ ಜಕ್ಕೂರು ಮುಖ್ಯರಸ್ತೆಯಲ್ಲಿ ಸೆಲೂನ್ ಆರಂಭಿಸಿದ್ದೆ. ಆದರೆ, ಇದೀಗ ಜನರೇ ಬರುತ್ತಿಲ್ಲ. ಐದಾರು ತಿಂಗಳಿನಿಂದ ಸಾಲ ಮಾಡಿ ಬಾಡಿಗೆ ಪಾವತಿ ಮಾಡಿದ್ದೇನೆ. ಹೀಗಾಗಿ, ಇದೀಗ ಮಾರಾಟಕ್ಕೆ ಮುಂದಾಗಿದ್ದೇನೆ ಎಂದು 1.5 ಲಕ್ಷ ರೂ.ಗಳಿಗೆ ಸೆಲೂನ್ ಮಾರಾಟಕ್ಕೆ ಇಟ್ಟಿರುವ ಮಾಲಕ ವೆಂಕಟೇಶ್ ನುಡಿದರು.

‘ಬಾಡಿಗೆ ತಗ್ಗಿಸಬೇಕಿತ್ತು'

ಕಟ್ಟಡಗಳ ಮಾಲಕರಿಗೆ ಬಾಡಿಗೆ ವಿಚಾರದಲ್ಲಿ ಕೆಲ ನಿಯಮಗಳನ್ನು ಜಾರಿಗೊಳಿಸಲು ಬಿಬಿಎಂಪಿ ಅಥವಾ ಸರಕಾರವೇ ಮುಂದಾಗಿದ್ದರೆ, ಹಲವು ವ್ಯಾಪಾರಿಗಳಿಗೆ ಅನುಕೂಲವಾಗುತಿತ್ತು.

-ಸುರೇಶ್ ರಾವ್, ಬೇಕರಿ ವ್ಯಾಪಾರಿ

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News