ಹಿರಿಯ ಸಾಹಿತ್ಯ ವಿಮರ್ಶಕ ಡಾ.ಜಿ.ಎಸ್.ಅಮೂರ ನಿಧನ

Update: 2020-09-28 07:59 GMT

ಬೆಂಗಳೂರು, ಸೆ.28: ಹಿರಿಯ ಸಾಹಿತಿ, ಹೆಸರಾಂತ ಸಾಹಿತ್ಯ ವಿಮರ್ಶಕ ಡಾ.ಜಿ.ಎಸ್.ಅಮೂರ(95) ವಯೋಸಹಜ ಅನಾರೋಗ್ಯದಿಂದ  ಬೆಂಗಳೂರಿನಲ್ಲಿರುವ ತನ್ನ ಪುತ್ರನ ನಿವಾಸದಲ್ಲಿ ಸೋಮವಾರ ಬೆಳಗ್ಗೆ 5:30ರ ಸುಮಾರಿಗೆ ನಿಧನರಾದರು.

ಗುರುರಾಜ ಶಾಮಾಚಾರ್ಯ ಅಮೂರ ಅವರು ಹುಟ್ಟಿದ್ದು 1925ರ ಮೇ 8ರಂದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಬೊಮ್ಮನಹಳ್ಳಿಯಲ್ಲಿ. ಅವರ ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ, ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.

ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿಎ (ಗೌರವ) ಪದವಿ ಪಡೆದಿದ್ದ ಅವರು ಬಳಿಕ ಕುಮಟಾ, ಗದಗ ಹಾಗೂ ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ 16 ವರ್ಷ ಸೇವೆ ಸಲ್ಲಿಸಿದರು. ಹದಿನಾಲ್ಕು ವಿದ್ಯಾರ್ಥಿಗಳಿಗೆ ಪಿಎಚ್ ಡಿ ಮಾರ್ಗದರ್ಶನ ಹಾಗೂ 3 ವಿದ್ಯಾರ್ಥಿಗಳಿಗೆ ಎಂಫಿಲ್ ಮಾರ್ಗದರ್ಶ ನೀಡಿದ್ದರು. ಸದ್ಯ ಧಾರವಾಡದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದರು. 

ಆಧುನಿಕ ಕನ್ನಡ ವಿಮರ್ಶೆ, ಮಹಾಕವಿ ಮಿಲ್ಟನ್. ಕೃತಿಪರೀಕ್ಷೆ: ಅ.ನ.ಕೃಷ್ಣರಾಯ, ಭುವನದ ಭಾಗ್ಯ, ವ್ಯವಸಾಯ ಅರ್ಥಲೋಕ, ಕನ್ನಡ ಕಥನ ಸಾಹಿತ್ಯ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 

ಇವರ ಸಾಹಿತ್ಯ ಕೃಷಿಗೆ ಹಲವು ಪ್ರಶಸ್ತಿಗಳು ಬಂದಿವೆ. ಭುವನದ ಭಾಗ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ (ಕೊಲ್ಕತ್ತಾ), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ,ಅ.ನ.ಕೃ.ಪ್ರಶಸ್ತಿ ಮುಂತಾದ ಎಂಟು ಪುರಸ್ಕಾರಗಳು ಬಂದಿವೆ. ಇತ್ತೀಚೆಗಷ್ಟೆ ಕನ್ನಡ ಸಾಹಿತ್ಯ ಪರಿಷತ್ ಅವರಿಗೆ ನೃಪತುಂಗ ಪ್ರಶಸ್ತಿ ಘೋಷಿಸಿದೆ.

ಮುಖ್ಯಮಂತ್ರಿ ಸಂತಾಪ

 ಕನ್ನಡದ ಖ್ಯಾತ ಸಾಹಿತಿ, ವಿಮರ್ಶಕ ಡಾ: ಜಿ.ಎಸ್.ಅಮೂರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅಮೂರರು, ಆಗಲೇ 'ಕಾಮಿಡಿಯ ಪರಿಕಲ್ಪನೆ' ಎಂಬ ಮಹಾಪ್ರಬಂಧ ಬರೆದು ಗೌರವ ಡಾಕ್ಟರೇಟ್ ಪಡೆದಿದ್ದರು. ಕನ್ನಡ ಮತ್ತು ಆಂಗ್ಲ ಭಾಷೆಯ ಮೇಲೆ ಪಾಂಡಿತ್ಯ ಹೊಂದಿದ್ದರು. ಆಧುನಿಕ ಕನ್ನಡ ಸಾಹಿತ್ಯ ವಿಮರ್ಶಕರಲ್ಲಿ ಅಗ್ರಮಾನ್ಯರೆಂದು ಪರಿಗಣಿಸಲ್ಪಟ್ಟಿರುವ ಡಾ:ಅಮೂರ ಅವರು ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೆ ಅವರಿಗೆ ನೃಪತುಂಗ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ದುಃಖವನ್ನುಂಟು ಮಾಡಿದೆ.

ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಭಿಮಾನಿಗಳು ಮತ್ತು ಶಿಷ್ಯವೃಂದಕ್ಕೆ ನೋವನ್ನು ಭರಿಸಲುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News