ಕೃಷಿ ಮಸೂದೆಗಳನ್ನು ಪ್ರತಿಭಟಿಸಿ ಇಂಡಿಯಾ ಗೇಟ್ ಬಳಿ ಟ್ರಾಕ್ಟರ್‌ಗೆ ಬೆಂಕಿ

Update: 2020-09-28 04:56 GMT

 ಹೊಸದಿಲ್ಲಿ,ಸೆ.28: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ವೇಳೆ ದಿಲ್ಲಿಯ ಹೃದಯ ಭಾಗದಲ್ಲಿರುವ ಇಂಡಿಯಾ ಗೇಟ್ ಬಳಿ ಸೋಮವಾರ ಬೆಳಗ್ಗೆ ಟ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದ್ದು, ಇದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ರಾಕ್ಟರ್‌ನ್ನು ತೆರವುಗೊಳಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಕಳೆದ ರವಿವಾರ ಸಂಸತ್ತಿನಲ್ಲಿ ಅಂಗೀಕರಿಸಿದ ಮೂರು ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ರವಿವಾರ ಅಂಕಿತ ಹಾಕಿದ್ದಾರೆ.ಇದು ವಿಶೇಷವಾಗಿ ಪಂಜಾಬ್ ಹಾಗೂ ಹರ್ಯಾಣ ರೈತರ ಪ್ರತಿಭಟನೆ ಹೆಚ್ಚಲು ಕಾರಣವಾಗಿದೆ.
ಸೆಂಟ್ರಲ್ ದಿಲ್ಲಿಯಲ್ಲಿ ಸೋಮವಾರ 15ರಿಂದ 20ರಷ್ಟಿದ್ದ ಜನರು ಬೆಳಗ್ಗೆ 7:15ರಿಂದ 7:30ರ ಸಮಯದಲ್ಲಿ ಒಂದೆಡೆ ಜಮಾಯಿಸಿ ಹಳೆಯ ಟ್ರಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರು ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
'ದೇಶದ ಧಾನ್ಯದ ಬಟ್ಟಲು' ಎಂದು ಕರೆಯಲ್ಪಡುವ ರಾಜ್ಯಗಳಲ್ಲಿ ವಿಶೇಷವಾಗಿ ಪಂಜಾಬ್ ಹಾಗೂ ಹರ್ಯಾಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ವಾತಂತ್ರ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮ ಖಟ್ಕರ್ ಕಲಾನ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಇಂದು ಬೆಳಗ್ಗೆ ಇಂಡಿಯಾ ಗೇಟ್‌ನಲ್ಲಿ ನಡೆದ ಪ್ರತಿಭಟನೆಯನ್ನು ಪಂಜಾಬ್‌ನ ಯೂತ್ ಕಾಂಗ್ರೆಸ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರ ಮಾಡಿತು. ಸೆಪ್ಟಂಬರ್ 20 ರಂದು ಹರಿಯಾಣದ ಅಂಬಾಲಾದಲ್ಲಿ ಪಂಜಾಬ್ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಟ್ರಾಕ್ಟರ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News