ರೂ. 20 ಪಾವತಿ ಕುರಿತ ತಗಾದೆ: ಗ್ರಾಹಕನನ್ನು ಪುತ್ರನ ಎದುರೇ ಥಳಿಸಿ ಕೊಂದ ಕ್ಷೌರದಂಗಡಿ ಮಾಲಕ

Update: 2020-09-28 06:10 GMT

ಹೊಸದಿಲ್ಲಿ: ಇಪ್ಪತ್ತು ರೂಪಾಯಿ ಪಾವತಿ ವಿಚಾರದಲ್ಲಿ ಉಂಟಾದ ವಿವಾದದಿಂದ ರೊಚ್ಚಿಗೆದ್ದ ಕ್ಷೌರದಂಗಡಿ ಮಾಲಕ ಮತ್ತಾತನ ಸೋದರ 38 ವರ್ಷದ ಗ್ರಾಹಕನೊಬ್ಬನನ್ನು ಆತನ 13 ವರ್ಷದ ಪುತ್ರನ ಕಣ್ಣೆದುರಿನಲ್ಲಿಯೇ ಥಳಿಸಿ ಸಾಯಿಸಿದ್ದಾರೆ ಎನ್ನಲಾದ ಘಟನೆ ಉತ್ತರ ದಿಲ್ಲಿಯ ಬುರಾರಿಯಲ್ಲಿ ನಡೆದಿದೆ

ಘಟನೆ ಸೆಪ್ಟೆಂಬರ್ 24ರಂದು ನಡೆದಿದ್ದು ಕೊಲೆಗೀಡಾದ ವ್ಯಕ್ತಿಯನ್ನು ರೂಪೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕ್ಷೌರದಂಗಡಿ ಮಾಲಕ ಸರೋಜ್ ಮತ್ತಾತನ ಸಹೋದರ ಸಂತೋಷ್ ಎಂಬಿಬ್ಬರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ವಹಿಸಲಾಗಿದೆ.

ರೂಪೇಶ್ ಕುಮಾರ್ ವೃತ್ತಿಯಲ್ಲಿ ತರಕಾರಿ ಮಾರಾಟಗಾರನಾಗಿದ್ದು ಸಂತ್ ನಗರದಲ್ಲಿ ಪತ್ನಿ ಹಾಗೂ ಐವರು ಮಕ್ಕಳೊಂದಿಗೆ ವಾಸವಾಗಿದ್ದ. ಘಟನೆ ನಡೆದ ದಿನ ಸಂಜೆ ಶೇವಿಂಗ್‍ಗಾಗಿ ರೂಪೇಶ್ ಕ್ಷೌರದಂಗಡಿಗೆ ಹೋದಾಗ ಮಾಲಕ ರೂ. 50 ಪಾವತಿಸುವಂತೆ ಹೇಳಿದ್ದ, ಆಗ ರೂಪೇಶ್ ರೂ. 30 ಪಾವತಿಸಿ ಬಾಕಿ ಹಣ ಮರುದಿನದೊಳಗೆ ನೀಡುವುದಾಗಿ ಹೇಳಿದರೂ ಆರೋಪಿಗಳಿಬ್ಬರೂ ಕೇಳದೆ ಹೊಡೆಯಲು ಆರಂಭಿಸಿದ್ದರು. ಆಗ ರೂಪೇಶ್ ಪುತ್ರ ಆ ಕಡೆಯಿಂದ ಹೋಗುತ್ತಿದ್ದಾಗ ತಂದೆಯ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಗಮನಿಸಿ ಮಧ್ಯ ಪ್ರವೇಶಿಸಲು ಯತ್ನಿಸಿದರೂ ಆತನನ್ನು ದೂಡಲಾಯಿತು. ಪ್ರತ್ಯಕ್ಷದರ್ಶಿಗಳ್ಯಾರೂ ಸಹಾಯಕ್ಕೆ ಧಾವಿಸಲಿಲ್ಲ ಎಂದು ಕೊಲೆಗೀಡಾದ ಕುಮಾರ್ ಪತ್ನಿ ಆರೋಪಿಸಿದ್ದಾರೆ. ರೂಪೇಶ್‍ನನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನ ಜೀವವುಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News