ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲಾರೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-09-28 08:47 GMT

ಬೆಂಗಳೂರು, ಸೆ.28: ಭೂ ಸುಧಾರಣೆ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ ಎಂದು ಅಭಯ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೈತರಿಗೆ ಅನ್ಯಾಯವಾದರೆ, ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ ಎಂದು ಹೇಳಿದ್ದಾರೆ.

 ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳವಳಿ ಬಿಟ್ಡು ರೈತರು ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದರು.

ರೈತರಿಗಾಗಿಯೇ ತಾನು ಮೂವತ್ತು, ನಲವತ್ತು  ವರ್ಷಗಳಿಂದ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇನೆ. ತನ್ನ ರೈತ ಮಿತ್ರರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಯಡಿಯೂರಪ್ಪನಿಂದ ರೈತರಿಗೆ ಎಂದೂ ಅನ್ಯಾಯವಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ಬಗ್ಗೆ ರೈತ ಮುಖಂಡರೊಂದಿಗೆ ಮಾತನಾಡಿದ್ದೇನೆ. ಅವರಿಗೆ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗುವುದಿಲ್ಲ ಎಂದು ಮನವರಿಕೆ ಮಾಡಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಕಾಯ್ದೆ ತಿದ್ದುಪಡಿ ಮಾಡುವ ಸರಕಾರ ತೆಗೆದುಕೊಂಡಿರುವ ನಿರ್ಧಾರದಿಂದ ರೈತ ಸಮುದಾಯಕ್ಕೆ ಒಳ್ಳೆಯದಾಗಲಿದೆ. ಎಪಿಎಂಸಿ ಕಾಯ್ದೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ರೈತರಿಗೆ ಸತ್ಯ ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News