ಡ್ರಗ್ಸ್ ದಂಧೆ ಪ್ರಕರಣ: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ

Update: 2020-09-28 13:37 GMT

ಬೆಂಗಳೂರು, ಸೆ.28: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಜಾಗೊಳಿಸಿ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಆದೇಶಿಸಿದೆ. ಇನ್ನುಳಿದ ಆರೋಪಿಗಳ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. 

ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಧೀಶ ಜಿ.ಎಂ.ಶೀನಪ್ಪ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಸಿಸಿಬಿ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಹಂತದಲ್ಲಿ ರಾಗಿಣಿ, ಸಂಜನಾಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು. 

ಸಂಜನಾ ಪರ ವಾದಿಸಿದ ವಕೀಲ ಶ್ರೀನಿವಾಸಮೂರ್ತಿ ಅವರು, ಆರೋಪಿ ರವಿಶಂಕರ್ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳು ರೆಕಾರ್ಡ್ ಮಾಡಿದ್ದಾರೆ. ಅದರಲ್ಲಿ ನಗರದ ವಿವಿಧೆಡೆ ಪಾರ್ಟಿ ನಡೆಸಿರುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಬಿಟ್ಟರೆ ಯಾವುದೇ ಪ್ರಮುಖ ಅಂಶಗಳಿಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧಾರದ ಮೇಲೆ ಎಫ್‌ಐಆರ್ ಮಾಡಲಾಗಿದೆ. ದಾಖಲಾಗಿರುವ ಎಫ್‌ಐಅರ್ ನಲ್ಲಿ ಅನೇಕ ಸೆಕ್ಷನ್‌ಗಳನ್ನ ಹಾಕಲಾಗಿದೆ. ಆದರೆ, ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೀಠಕ್ಕೆ ತಿಳಿಸಿದರು. 

ಎಕ್ಸ್ ಟೆಸಿ ಮಾತ್ರೆ ಸೇವಿಸಿದ್ದಾರೆಂದು ಆರೋಪಿಸಲಾಗಿದ್ದು, ಎಫ್‌ಐಆರ್‌ನಲ್ಲಿ ನಿರ್ದಿಷ್ಟ ಆರೋಪಗಳೇ ಇಲ್ಲ. ಎಕ್ಸ್ ಟೆಸಿ ಮಾತ್ರೆಯ ಪ್ರಸ್ತಾವ ಬಿಟ್ಟರೆ ಬೇರೆ ಯಾವುದೇ ಆರೋಪಗಳಿಲ್ಲ. ಇತರೆ ಆರೋಪಿಗಳ ಹೇಳಿಕೆಯ ಮೇಲೆ ಪ್ರಕರಣ ನಿಂತಿದೆ. ಆದರೆ, ಸಂಜನಾ ಗಲ್ರಾನಿ ಅವರನ್ನ ಯಾಕೆ ಬಂಧಿಸಲಾಗಿದೆ ಎಂಬುವುದು ಇದುವರೆಗೂ ಗೊತ್ತಾಗಿಲ್ಲ. ಕಕ್ಷಿದಾರರಿಗೆ ಬಂಧನ ವೇಳೆ ಯಾಕೆ ಬಂಧನ ಮಾಡಲಾಗುತ್ತಿದೆ ಎಂದು ತಿಳಿಸಿಲ್ಲ. ಹೀಗಾಗಿ, ಸಂಜನಾ ಗಲ್ರಾನಿ ಅವರ ಬಂಧನ ಕಾನೂನು ಬಾಹಿರವಾಗಿದ್ದು, ಇಲ್ಲಿಯವರೆಗೂ ಪೊಲೀಸರು ನ್ಯಾಯಾಲಯದ ಮುಂದೆ ಯಾವ ಸಾಕ್ಷ್ಯವನ್ನ ಹಾಜರುಪಡಿಸಿಲ್ಲ. ಇದೇ ವೇಳೆ ವಕೀಲರು ಕೆಲ ಹಳೆ ಪ್ರಕರಣಗಳ ಉದಾಹರಣೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿಕೊಂಡಿದರು. 

ಸಿಸಿಬಿ ಪರ ವಾದಿಸಿದ ವಕೀಲರು, ನ್ಯಾಯಾಲಯದ ಮುಂದೆ ಮುಚ್ಚಿದ ಲಕೋಟೆಯಲ್ಲಿ ಕೆಲ ಸಿಡಿಗಳನ್ನು ಸಲ್ಲಿಸಿದರು. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಸಿಡಿಯಲ್ಲಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಆರೋಪಿ ರವಿಶಂಕರ್ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿಚಾರಣೆ ವೇಳೆ ಬಯಲಿಗೆ ಬಂದ ಅಂಶಗಳ ಮೇಲೆ ತನಿಖೆ ನಡೆಯುತ್ತಿದೆ. ಡ್ರಗ್ಸ್ ಸೇವನೆ ಮಾಡಿರುವುದೇ ಒಳ್ಳೆಯ ಸಾಕ್ಷ್ಯ ಆಗುತ್ತದೆ. ತನಿಖೆ ಮುಗಿಯುವ ಮುನ್ನವೇ ಜಾಮೀನು ನೀಡುವುದು ಸರಿಯಲ್ಲ ಎಂದು ಪೀಠಕ್ಕೆ ತಿಳಿಸಿದರು. 

ರಾಗಿಣಿ ಪರ ವಾದಿಸಿದ ವಕೀಲರು, ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ನಾಶವೂ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೆ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ ಎಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News