ಸಚಿವ ಸಂಪುಟ ವಿಸ್ತರಣೆಗೆ ಶೀಘ್ರವೇ ಮುಹೂರ್ತ ನಿಗದಿ: ಸಿಎಂ ಯಡಿಯೂರಪ್ಪ

Update: 2020-09-28 12:06 GMT

ಬೆಂಗಳೂರು, ಸೆ. 28: ಸಚಿವ ಸಂಪುಟ ವಿಸ್ತರಣೆ ಸಂಬಂಧ ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊಸದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ಮುಹೂರ್ತ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಇದ್ದ ಅಡೆತಡೆಗಳೆಲ್ಲವೂ ನಿವಾರಣೆಯಾಗಿದೆ. ಸಂಪುಟ ವಿಸ್ತರಿಸಲು ಯಾವುದೇ ಅಡ್ಡಿ ಇಲ್ಲ. ಹಾಗಾಗಿ ಸದ್ಯದಲ್ಲೇ ದಿಲ್ಲಿಯ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಈಗಿರುವ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ಬಾಧಕಗಳಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ನಿಶ್ಚಿತವಾಗಿ ನಡೆಯಲಿದೆ. ಸಂಪುಟವನ್ನು ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನವೆ ವಿಸ್ತರಿಸಬೇಕೆಂಬ ಉದ್ದೇಶವಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ನಿಶ್ಚಿತವಾಗಿಯೂ ಆಗಲಿದೆ ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯರಾಗಿರುವ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಹಿರಿಯ ಶಾಸಕರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಆರೇಳು ಮಂದಿ ಶಾಸಕರು ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳಾಗಿದ್ದು, ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ತೀರ್ಮಾನವಾಗಲಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News