ಆರು ದಿನಗಳ ಅಧಿವೇಶನದಲ್ಲಿ 36 ವಿಧೇಯಕಗಳ ಅಂಗೀಕಾರ: ಸ್ಪೀಕರ್ ಕಾಗೇರಿ

Update: 2020-09-28 12:53 GMT

ಬೆಂಗಳೂರು, ಸೆ. 28: ಆರು ದಿನಗಳ ಕಾಲ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಭೂ ಸುಧಾರಣೆ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 36 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕಿನ ಆತಂಕದ ನಡುವೆ ಸೆ.21ರಿಂದ 26ರವರೆಗೆ ಆರು ದಿನಗಳ ಕಾಲ ಅಧಿವೇಶನ ನಡೆಸಿದ್ದು, ಶೇ.90ಕ್ಕೂ ಹೆಚ್ಚು ಕಾರ್ಯಕಲಾಪಗಳನ್ನು ಪೂರ್ಣಗೊಳಿಸಲಾಗಿದೆ. ಆರು ದಿನಗಳ ಕಾಲ ನಡೆದ ಅಧಿವೇಶನ ಒಟ್ಟು 40 ಗಂಟೆ ಕಲಾಪ ನಡೆಸಲಾಗಿದೆ ಎಂದು ತಿಳಿಸಿದರು.

ಸದಸ್ಯರಿಂದ ಒಟ್ಟು 3,071 ಪ್ರಶ್ನೆ ಸ್ವೀಕರಿಸಲಾಗಿದ್ದು, ಆ ಪೈಕಿ 1,109 ಪ್ರಶ್ನೆಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 351ರಡಿ 60 ಸೂಚನೆಗಳನ್ನು ಅಂಗೀಕರಿಸಲಾಗಿದೆ. ಅದರಲ್ಲಿ 35 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ. 72 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಕಾಗೇರಿ ತಿಳಿಸಿದರು.

ವರದಿಗಳ ಮಂಡನೆ: ವಿಧಾನ ಮಂಡಲ ಸಮಿತಿಗಳ 6 ವರದಿಯನ್ನು ಜಂಟಿ ಪರಿಶೀಲನಾ ಸಮಿತಿ ವಿಶೇಷ ವರದಿ, 57 ಅಧಿಸೂಚನೆಗಳು, 19 ಅಧ್ಯಾದೇಶಗಳು, 62 ವಾರ್ಷಿಕ ವರದಿ, 69 ಲೆಕ್ಕಪರಿಶೋಧನಾ ವರದಿ, ಅನುಷ್ಠಾನ 1 ವರದಿ, 1 ಅನುಪಾಲನಾ ವರದಿ, 3 ವಿಶೇಷ ವರದಿ ಮಂಡಿಸಲಾಗಿದೆ. 4 ಅರ್ಜಿಗಳನ್ನು ಒಪ್ಪಿಸಲಾಗಿದೆ. 2020-21ನೆ ಸಾಲಿನ ಪೂರಕ ಅಂದಾಜು ಮೊದಲ ಕಂತಿನ ಬೇಡಿಕೆಗೆ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ವಿವರ ನೀಡಿದರು.

ವಿಧಾನ ಪರಿಷತ್‍ನಲ್ಲಿ ತಿದ್ದುಪಡಿಗಳೊಂದಿಗೆ 2 ಧನ ವಿನಿಯೋಗ ವಿಧೇಯಕ, 37 ವಿಧೇಯಕಗಳ ಪೈಕಿ 36 ವಿಧೇಯಕ ಅಂಗೀಕಾರವಾಗಿವೆ. 1 ವಿಧೇಯಕ ತಡೆ ಹಿಡಿಯಲಾಗಿದೆ. ನಿಯಮ 60 ಅಡಿ ನೀಡಿದ್ದ 3 ನಿಲುವಳಿ, 20 ಸೂಚನೆಗಳು ನಿಯಮಗಳ 69 ಅಡಿ ಸ್ಪೀಕರಿಸಲಾಗಿದೆ. 1 ಸೂಚನೆ ಮೇಲೆ ಚರ್ಚಿಸಲಾಗಿದೆ ಎಂದು ಸ್ಪೀಕರ್ ಕಾಗೇರಿ ಇದೇ ವೇಳೆ ಮಾಹಿತಿ ನೀಡಿದರು.

28 ಮಂದಿ ಗೈರು: ಕೋವಿಡ್-19 ಸೋಂಕಿನಿಂದ ಒಟ್ಟು 28 ಮಂದಿ ಸಚಿವರು ಹಾಗೂ ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದರು. ಬಿಜೆಪಿಯ-12, ಕಾಂಗ್ರೆಸ್-10, ಜೆಡಿಎಸ್-6 ಸದಸ್ಯರಿಗೆ ಕೊರೋನ ವೈರಸ್ ಸೋಂಕಿನ ಹಿನ್ನೆಲೆ ಗೈರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಸದನ ನಡೆಸಲು ಸಹಕಾರ ನೀಡಿದ ಸಿಎಂ, ವಿಪಕ್ಷ ನಾಯಕರು, ಸಚಿವರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಸಮಿತಿ ರಚನೆ: ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ ತರಲು ಶಿಫಾರಸು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದ ಅವರು, ಕಾರ್ಯ ಕಲಾಪದ ನಡವಳಿಕೆಯಲ್ಲಿ ಕೆಲ ಲೋಪದೋಷಗಳಿವೆ. ಅವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುತ್ತದೆ. ಈ ಸಂಬಂಧ ಸಮಿತಿ ರಚಿಸಿ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News