ಕೋರ್ಟ್ ಮೆಟ್ಟಿಲೇರಿದ ಅಧಿಕಾರಿಗಳು: ಪುಸ್ತಕ ಖರೀದಿ ಸೇರಿ ಎಲ್ಲ ಯೋಜನೆಗಳು ಸ್ಥಗಿತ

Update: 2020-09-28 13:32 GMT

ಬೆಂಗಳೂರು, ಸೆ.28: ನಗರದ ಕೇಂದ್ರ ವಲಯದ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕಳೆದ 10 ತಿಂಗಳಿಂದ ಪುಸ್ತಕ ಖರೀದಿ ಸೇರಿ ಎಲ್ಲ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಕೇಂದ್ರ ವಲಯದ ಉಪನಿರ್ದೇಶಕ ಹುದ್ದೆಗೆ ಸಂಬಂಧಿಸಿದಂತೆ ಸಿ. ಪಾರ್ವತಮ್ಮ ಹಾಗೂ ದಿವಾಕರ್ ಎಂಬುವವರು ಕಳೆದ ವರ್ಷಾಂತ್ಯಕ್ಕೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗುವವರೆಗೂ ಕಡ್ಡಾಯ ರಜೆಯಲ್ಲಿ ಇರುವಂತೆ ಪಾರ್ವತಮ್ಮ ಅವರಿಗೆ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಯೋಜನೆಗಳು ಅನುಷ್ಠಾನಗೊಳ್ಳಲು ಹಿನ್ನಡೆಯುಂಟಾಗಿದೆ.

ಉಳಿದಂತೆ ದಿವಾಕರ್ ಅವರನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರಾಜಾಜಿನಗರದಲ್ಲಿರುವ ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಸ್ಥಾನಕ್ಕೆ ವರ್ಗ ಮಾಡಲಾಗಿದೆ. ಸದ್ಯ ಹಾಸನ ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಸಿ.ಜೆ. ವೆಂಕಟೇಶ್ ಕೇಂದ್ರ ವಲಯದ ಪ್ರಭಾರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ವಲಯಕ್ಕೆ ಪೂರ್ಣಾವಧಿ ಉಪನಿರ್ದೇಶಕರಿಲ್ಲದ ಪರಿಣಾಮ ಪುಸ್ತಕ ಮತ್ತು ಪೀಠೋಪಕರಣ ಖರೀದಿ, ಹೊಸ ಗ್ರಂಥಾಲಯಗಳ ಆರಂಭ, ಸಂಚಾರ ಗ್ರಂಥಾಲಯಕ್ಕಾಗಿ ವಾಹನ ಖರೀದಿಯೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

2015ನೇ ಸಾಲಿನ ಪುಸ್ತಕ ಖರೀದಿಗೆ ಹಣ ಪಾವತಿ ಪ್ರಕ್ರಿಯೆ ಪ್ರಾರಂಭಿಸುವ ವೇಳೆ ಉಪನಿರ್ದೇಶಕರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾದ ಬಳಿಕ ಕರದ ಹಣವನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ಸಿಗಲಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಬಿಬಿಎಂಪಿಯು ನಿಯಮಿತವಾಗಿ ಗ್ರಂಥಾಲಯ ಕರವನ್ನು ಪಾವತಿಸದ ಪರಿಣಾಮ ಹಲವು ಗ್ರಂಥಾಲಯಗಳು ಮೂಲಸೌಕರ್ಯ ಇಲ್ಲದೆ ಸೊರಗುತ್ತಿವೆ. ಸುಮಾರು 350 ಕೋಟಿ ಗ್ರಂಥಾಲಯ ಕರವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ. ಈ ನಡುವೆ ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ವಲಯಕ್ಕೆ ಪೂರ್ಣಾವಧಿ ಉಪನಿರ್ದೇಶಕರು ಇಲ್ಲ. ಹೀಗಾಗಿ, ಸಂಗ್ರಹವಾದ ಕರವನ್ನೂ ಕೂಡ ಪುಸ್ತಕ ಮತ್ತು ಪೀಠೋಪಕರಣಗಳ ಖರೀದಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರ ವಲಯದಡಿ 28 ಗ್ರಂಥಾಲಯಗಳು ಹಾಗೂ ಒಂದು ಸಂಚಾರ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. 

ವೇತನ ಪಾವತಿಗೆ ಸೀಮಿತ: ಬಿಬಿಎಂಪಿ ಪಾವತಿಸುವ ಗ್ರಂಥಾಲಯ ಕರದ ಅನುಸಾರ ಗ್ರಂಥಾಲಯ ಇಲಾಖೆಯು ಬಜೆಟ್ ರೂಪಿಸಿ, ಐದು ವಲಯಗಳಿಗೆ ಸಮಾನವಾಗಿ ಹಣ ಹಂಚಿಕೆ ಮಾಡುತ್ತಿದೆ. ಪ್ರತಿ ವರ್ಷ ಪುಸ್ತಕ ಹಾಗೂ ಪೀಠೋಪಕರಣಗಳ ಖರೀದಿಗೆ ಸುಮಾರು 5 ಕೋಟಿ ವೆಚ್ಚವನ್ನು ಪ್ರತಿ ವಲಯ ಮಾಡಲಿದೆ. ಪ್ರಭಾರ ಉಪನಿರ್ದೇಶಕರಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರವಿಲ್ಲದ ಪರಿಣಾಮ ಕೇಂದ್ರ ವಲಯವು ಕೆಲ ತಿಂಗಳುಗಳಿಂದ ಸಿಬ್ಬಂದಿಗೆ ವೇತನ ನೀಡುವುದಕ್ಕಷ್ಟೇ ಸೀಮಿತವಾಗಿದೆ.

ಪುಸ್ತಕ ಖರೀದಿ; ಹಣ ಪಾವತಿ ಬಾಕಿ: ನಗರ ಕೇಂದ್ರ ಗ್ರಂಥಾಲಯದ ಕೇಂದ್ರ ವಲಯವು 2013–14 ಹಾಗೂ 2014–15ನೇ ಸಾಲಿನ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪ್ರಕಾಶಕರಿಗೆ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಯಾವಾಗ ಹಣ ಪಾವತಿಯಾಗುತ್ತದೆ ಎಂಬ ಖಚಿತತೆಯೂ ಇಲ್ಲ.

ಕೇಂದ್ರ ವಲಯದ ಅಧಿಕಾರಿಗಳು ಉಪನಿರ್ದೇಶಕ ಹುದ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮವಾಗಿ ಬೇರೊಬ್ಬ ಅಧಿಕಾರಿ ದೈನಂದಿನ ಚಟುವಟಿಕೆಯನ್ನು ಪ್ರಭಾರಿಯಾಗಿ ನೋಡಿಕೊಳ್ಳುತ್ತಿದ್ದಾರೆ.

–ಸತೀಶ ಕುಮಾರ್ ಎಸ್. ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News