ಕೊರೋನ ಸೋಂಕು: ಉಮಾ ಭಾರತಿ ಆಸ್ಪತ್ರೆಗೆ ದಾಖಲು

Update: 2020-09-28 14:47 GMT

ಡೆಹ್ರಾಡೂನ್, ಸೆ.28: ತನಗೆ ಕೊರೋನ ಸೋಂಕು ದೃಢಪಟ್ಟಿದ್ದು ಮೂರು ಕಾರಣಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸೆ.30ರಂದು ಲಕ್ನೊದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನೀಡಲಿರುವ ಮಹಾ ತೀರ್ಪಿನ ಸಂದರ್ಭ ನ್ಯಾಯಾಲಯದಲ್ಲಿ ಉಪಸ್ಥಿತರಿರಲು ಬಯಸುತ್ತಿರುವುದು ಇದರಲ್ಲಿ ಒಂದು ಕಾರಣ ಎಂದು ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ತನ್ನ ಆರೋಗ್ಯಸ್ಥಿತಿಯ ಕುರಿತ ಪರಿಷ್ಕೃತ ಮಾಹಿತಿಯನ್ನು ನಿರಂತರ ಅಪ್‌ಲೋಡ್ ಮಾಡುತ್ತಿರುವ ಉಮಾ ಭಾರತಿ, ಸೋಮವಾರ ಮಾಡಿರುವ ಟ್ವೀಟ್‌ನಲ್ಲಿ ‘ನಾನು ಈಗಷ್ಟೇ ರಿಷಿಕೇಶ್‌ನ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದಕ್ಕೆ ಮೂರು ಕಾರಣಗಳಿವೆ. 1. ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ತುಂಬಾ ಚಿಂತಿತರಾಗಿರುವುದು. 2. ರವಿವಾರ ರಾತ್ರಿ ನನ್ನ ಜ್ವರ ಏಕಾಏಕಿ ಹೆಚ್ಚಿರುವುದು 3. ಆಸ್ಪತ್ರೆಯಿಂದ ಅನುಕೂಲಕರ ವರದಿ ಬಂದರೆ ಬುಧವಾರ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರಿರಲು ಬಯಸುತ್ತಿರುವುದು’ ಎಂದು ಉಲ್ಲೇಖಿಸಿದ್ದಾರೆ.

61 ವರ್ಷ ಪ್ರಾಯದ ಉಮಾಭಾರತಿ ಪರ್ವತ ಪ್ರದೇಶಗಳಲ್ಲಿ ಧ್ಯಾನ ಮಾಡಿದ ಬಳಿಕ ತನಗೆ ಜ್ವರ ಬಂದಿರುವುದಾಗಿ ಟ್ವೀಟ್ ಮಾಡಿದ್ದರು . ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ತನ್ನನ್ನು ನೇಣಿಗೇರಿಸಿದರೂ ಇದೊಂದು ಆಶೀರ್ವಾದವೆಂದು ಭಾವಿಸುತ್ತೇನೆ. ನನ್ನ ಹುಟ್ಟೂರಿನವರು ಅತ್ಯಂತ ಸಂತೋಷ ಪಡುತ್ತಾರೆ ಎಂದು ಹೇಳಿದ್ದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಉಮಾ ಭಾರತಿ, ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸಹಿತ ಬಿಜೆಪಿ ಮತ್ತು ವಿಶ್ವಹಿಂದು ಪರಿಷತ್‌ನ ಉನ್ನತ ಮುಖಂಡರು ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News