ಜನ ವಿರೋಧಿ ಕಾಯ್ದೆಗಳನ್ನು ತಿರಸ್ಕರಿಸಿ: ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕಾಂಗ್ರೆಸ್

Update: 2020-09-28 14:48 GMT
Photo: twitter/DKShivakumar

ಬೆಂಗಳೂರು, ಸೆ. 28: `ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊಸದಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಸೂದೆಗಳನ್ನು ತಿರಸ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರತಿಭಟನೆ ಬಳಿಕ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಭೂ ಸುಧಾರಣೆ, ಎಪಿಎಂಸಿ, ಕೈಗಾರಿಕಾ ವಿವಾದ ಕಾಯ್ದೆ ತಿದ್ದುಪಡಿ ಸಂಬಂಧ ಸರಕಾರ ತೆಗೆದುಕೊಂಡಿರುವ ತೀರ್ಮಾನವನ್ನು ರಾಜ್ಯಪಾಲರ ಮುಂದೆ ಪ್ರಶ್ನಿಸಲಾಗಿದೆ. ಬಂಡವಾಳ ಶಾಹಿಗಳಿಗೆ ಸಹಾಯ ಮಾಡಲು ಸರಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇಂತಹ ರೈತ ವಿರೋಧಿ ಕಾಯ್ದೆ ಇಲ್ಲದೆ ರಾಜ್ಯವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಗುಜರಾತಿನ ಸಿಎಂ ಆಗಿದ್ದಾಗ ಈ ರೀತಿ ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು. ಆದರೆ, ಈಗ ಅವರೇ ತಮ್ಮ ಮಾತು ಮುರಿದು, ಈ ರೈತ ವಿರೋಧಿ ಕಾನೂನು ಮಾಡಲು ಮುಂದಾಗಿದ್ದಾರೆ. ಮೋದಿ ಅವರ ಕುರ್ಚಿ ಬದಲಾದಂತೆ ಅವರ ತೀರ್ಮಾನವೂ ಬದಲಾಗಿದೆ. ಕಾಂಗ್ರೆಸ್ ರೈತರ ಪರವಾಗಿ ನಿಂತು ಭೂ ಸುಧಾರಣೆ, ಎಪಿಎಂಸಿ, ಕೈಗಾರಿಕೆಗಳ ವಿವಾದ, ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ ಎಂದರು.

ಮೊದಲ ಬಾರಿಗೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಂದು ಮಸೂದೆಯನ್ನು ವಿಧಾನ ಪರಿಷತ್‍ನಲ್ಲಿ ತಿರಸ್ಕರಿಸಲಾಗಿದೆ. ರೈತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಬಂದ್ ಮಾಡುತ್ತಿವೆ. ಸರಕಾರ ಬಲವಂತದ ಕಾನೂನು ಕ್ರಮದ ಬೆದರಿಕೆ ಹಾಕುತ್ತಿದೆ. ಹೀಗಾಗಿ ಜನ ವಿರೋಧಿ ಕಾಯ್ದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಮನವಿ ಸಲ್ಲಿಸಿದ್ದೇವೆ. ರಾಷ್ಟ್ರಪತಿಗಳು ಈ ಮಸೂದೆಗಳನ್ನು ವಜಾ ಮಾಡಬೇಕೆಂದು ಕೋರುತ್ತೇವೆ ಎಂದರು.

ಸ್ವಾಭಿಮಾನ ಬಿಡೆವು: ಸಂಸದ ತೇಜಸ್ವಿ ಸೂರ್ಯ `ಬೆಂಗಳೂರು ಭಯೋತ್ಪಾದಕರ ತಾಣವಾಗಿದೆ' ಎಂದು ನಿನ್ನೆ ಹೇಳಿಕೆ ನೀಡಿದ್ದು, ಇದು ಬೆಂಗಳೂರು ಹಾಗೂ ರಾಜ್ಯಕ್ಕೆ ಮಸಿ ಬಳಿಯುವ ಪ್ರಯತ್ನವಾಗಿದೆ. ಈತ ಬೆಂಗಳೂರನ್ನು ಕಟ್ಟಿಲ್ಲ. ನಮ್ಮ ನಾಯಕರುಗಳ ಪರಿಶ್ರಮದಿಂದ ಬೆಂಗಳೂರು ವಿಶ್ವಮಟ್ಟದ ಶಿಕ್ಷಣ, ಮಾಹಿತಿ ತಂತ್ರಜ್ಞಾನ ತಾಣವಾಗಿದೆ. ಇಲ್ಲಿಂದ ವಿಶ್ವಕ್ಕೆ ಇಂಜಿನಿಯರ್ ಗಳು, ವೈದ್ಯರು ರವಾನೆಯಾಗಿದ್ದಾರೆಯೇ ಹೊರತು ಭಯೋತ್ಪಾದಕರಲ್ಲ. ಶೇ.34ರಷ್ಟು ಐಟಿ ರಫ್ತು ಬೆಂಗಳೂರಿನಿಂದ ಆಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದ ಘನತೆ, ಮರ್ಯಾದೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ನೀವೆಲ್ಲರೂ ಸಜ್ಜಾಗಬೇಕು. ನಾವು ಪ್ರಾಣ ಬೇಕಾದರೆ ಬಿಡುತ್ತೇವೆ, ಸ್ವಾಭಿಮಾನ ಮಾತ್ರ ಬಿಟ್ಟುಕೊಡುವುದಿಲ್ಲ. ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇಬೇಕು. ಹುಟ್ಟು ಉಚಿತ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ನಮ್ಮ ರಾಜ್ಯದ ರಕ್ಷಣೆ ನಮ್ಮ ಕರ್ತವ್ಯ' ಎಂದು ಶಿವಕುಮಾರ್ ಹೇಳಿದರು.

ಸಹಿ ಅಭಿಯಾನ: ಮುಂದಿನ ತಿಂಗಳು 10ನೆ ತಾರೀಖಿನಿಂದ 30ರ ವರೆಗೂ ನಾವು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದು, ರಾಷ್ಟ್ರಪತಿಗಳು ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗುವುದು. ನಮ್ಮ ರಾಜ್ಯದಲ್ಲಿ ಆರೂವರೇ ಕೋಟಿ ಜನರಿದ್ದು, ಪ್ರತಿ ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿ ರೈತನಿಂದ ಸಹಿ ಸಂಗ್ರಹಿಸಬೇಕಿದೆ.

ಬ್ಲಾಕ್ ಅಧ್ಯಕ್ಷರು ಹಾಗೂ ಪರಾಜಿತ ಅಭ್ಯರ್ಥಿಗಳು ತಾವು ಎಷ್ಟೇ ದೊಡ್ಡವರಾದರೂ ಯಾವುದೇ ಜಾತಿಗೆ ಸೇರಿದ್ದರೂ ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಸಹಿ ಸಹಿತ ಮನವಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು. ಹೀಗಾಗಿ ಕರ್ನಾಟಕದಿಂದ ಅತಿ ಹೆಚ್ಚು ರೈತರ ಸಹಿ ಸಂಗ್ರಹವಾಗಬೇಕು. ಕರ್ನಾಟಕ ಭೂಸುಧಾರಣೆ ಹಾಗೂ ಕಾರ್ಮಿಕ ಕಾಯ್ದೆಗಳ ನೆಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ಹೋರಾಟ ದೊಡ್ಡದಾಗಿರಬೇಕು ಎಂದು ಶಿವಕುಮಾರ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News