ಜಮ್ಮು ಕಾಶ್ಮೀರ ಅಧಿಕೃತ ಭಾಷಾ ಅಧಿನಿಯಮಕ್ಕೆ ರಾಷ್ಟ್ರಪತಿ ಅಂಕಿತ

Update: 2020-09-28 15:06 GMT

 ಶ್ರೀನಗರ, ಸೆ.28: ಜಮ್ಮು ಕಾಶ್ಮೀರ ಅಧಿಕೃತ ಭಾಷಾ ಅಧಿನಿಯಮ 2020ಕ್ಕೆ ರಾಷ್ಟ್ರಪತಿ ಅಂಕಿತ ದೊರೆತ ಬಳಿಕ ಅದನ್ನು ಸರಕಾರದ ಗಜೆಟ್(ರಾಜ್ಯಪತ್ರ)ನಲ್ಲಿ ಪ್ರಕಟಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಕೇಂದ್ರಾಡಳಿತ ಜಮ್ಮು-ಕಾಶ್ಮೀರದ ಅಧಿಕೃತ ಭಾಷೆಯ ಪಟ್ಟಿಯಲ್ಲಿ ಉರ್ದು ಮತ್ತು ಇಂಗ್ಲಿಷ್‌ನ ಜೊತೆಗೆ ಕಾಶ್ಮೀರಿ, ಡೋಗ್ರಿ ಮತ್ತು ಹಿಂದಿ ಭಾಷೆಯನ್ನು ಸೇರಿಸಲು ಹೊಸ ಅಧಿನಿಯಮ ಅವಕಾಶ ಮಾಡಿಕೊಟ್ಟಿದೆ. ಈ ಅಧಿನಿಯಮ ಜಾರಿಗೆ ಬರುವುದಕ್ಕಿಂತ ಮೊದಲು ಯಾವುದೆಲ್ಲಾ ಆಡಳಿತಾತ್ಮಕ ಮತ್ತು ಶಾಸಕಾಂಗ ಉದ್ದೇಶಕ್ಕೆ ಇಂಗ್ಲಿಷ್ ಭಾಷೆಯನ್ನು ಬಳಸಲಾಗುತ್ತಿತ್ತೋ ಆ ಕಾರ್ಯಗಳಿಗೆ ಇಂಗ್ಲಿಷ್ ಭಾಷೆಯ ಬಳಕೆಯನ್ನು ಮುಂದುವರಿಸಬಹುದು. ಜಮ್ಮು-ಕಾಶ್ಮೀರದ ವಿಧಾನಸಭೆಯ ಕಾರ್ಯಕಲಾಪ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಗಳಲ್ಲಿ ನಡೆಯುತ್ತದೆ ಎಂದು ಸರಕಾರ ಹೇಳಿದೆ.

ಕೇಂದ್ರಾಡಳಿತ ಪ್ರದೇಶದ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಕಲೆ, ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಂತಹ ಸಾಂಸ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಲೆಫ್ಟಿನೆಂಟ್ ಗವರ್ನರ್ ಕ್ರಮ ಕೈಗೊಳ್ಳಬೇಕು. ಅಲ್ಲದೆ ಗೋಜ್ರಿ, ಪಹರಿ ಮತ್ತು ಪಂಜಾಬಿ ಭಾಷೆಗಳಿಗೆ ಪ್ರೋತ್ಸಾಹ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಹೇಳಿದೆ.

ಜಮ್ಮು-ಕಾಶ್ಮೀರ ಅಧಿಕೃತ ಭಾಷಾ ಮಸೂದೆ 2020ಕ್ಕೆ ಸೆಪ್ಟಂಬರ್ 22ರಂದು ಲೋಕಸಭೆಯಲ್ಲಿ ಮತ್ತು ಸೆಪ್ಟಂಬರ್ 23ರಂದು ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News