ನಾಗರಿಕಾ ಸೇವಾ ಪರೀಕ್ಷೆ ಮುಂದೂಡಿಕೆ ಅಸಾಧ್ಯ: ಯುಪಿಎಸ್‌ಸಿ

Update: 2020-09-28 15:14 GMT

 ಹೊಸದಿಲ್ಲಿ, ಸೆ.28: ಅಕ್ಟೋಬರ್ 4ಕ್ಕೆ ನಿಗದಿಯಾಗಿರುವ ನಾಗರಿಕ ಸೇವಾ ಪರೀಕ್ಷೆ(ಪ್ರಿಲಿಮ್ಸ್)ಯನ್ನು ಇನ್ನಷ್ಟು ಮುಂದೂಡಲು ಸಾಧ್ಯವಿಲ್ಲ ಎಂದು ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ(ಪ್ರಿಲಿಮ್ಸ್)ಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಯುಪಿಎಸ್‌ಸಿ ಈ ಹೇಳಿಕೆ ನೀಡಿದೆ. ಪರಿಷ್ಕೃತ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 4ರಂದು ಸಿವಿಲ್ ಸರ್ವಿಸ್ ಪರೀಕ್ಷೆ ನಡೆಸುವುದು ಸಂವಿಧಾನದ ಅನುಚ್ಛೇದ 19(1)(ಜಿ)ದಡಿ , ಜನತೆಗೆ ಸೇವೆ ಸಲ್ಲಿಸುವ ವೃತ್ತಿ/ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿದಾರರಿಗೆ ಇರುವ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ ಪರೀಕ್ಷೆಯನ್ನು ಮುಂದೂಡುವಂತೆ ಸೂಚಿಸಬೇಕೆಂದು ಕೋರಿ ವಾಸಿರೆಡ್ಡಿ ಗೋವರ್ಧನ ಸಾಯಿಪ್ರಕಾಶ್ ಹಾಗೂ ಇತರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಈ 7 ಗಂಟೆ ಅವಧಿಯ ಪರೀಕ್ಷೆಯಲ್ಲಿ ದೇಶದ 72 ನಗರಗಳಲ್ಲಿ ಸುಮಾರು 6 ಲಕ್ಷ ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಇದು ಶೈಕ್ಷಣಿಕ ಪರೀಕ್ಷೆಗಿಂತ ಭಿನ್ನವಾಗಿರುವ ಕಾರಣ, ಪರೀಕ್ಷೆಯನ್ನು ಮುಂದೂಡಿದರೆ ಅದರಿಂದ ಶೈಕ್ಷಣಿಕ ವರ್ಷದ ಚಟುವಟಿಕೆಗೆ ತೊಡಕು ಮುಂತಾದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News