ಆರ್ಮೇನಿಯ-ಅಝರ್ ‌ಬೈಜಾನ್ ಭೀಕರ ಯುದ್ಧ: 31 ಸೈನಿಕರ ಸಾವು

Update: 2020-09-28 15:32 GMT

 ಯೆರೆವಾನ್ (ಆರ್ಮೇನಿಯ), ಸೆ. 28: ವಿವಾದಾಸ್ಪದ ನಗೋರ್ನೊ-ಕರಬಾಕ್ ವಲಯದಲ್ಲಿ ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ನಡುವೆ ಸೋಮವಾರವೂ ಭೀಕರ ಯುದ್ಧ ಮುಂದುವರಿದಿದೆ ಹಾಗೂ ಯುದ್ಧದಲ್ಲಿ ಮೇಲುಗೈ ಸಾಧಿಸಿರುವುದಾಗಿ ಎರಡೂ ದೇಶಗಳು ಹೇಳಿಕೊಂಡಿವೆ.

ಈ ವಲಯವು ಅಝರ್‌ಬೈಜಾನ್‌ನ ಭಾಗವಾಗಿದೆ, ಆದರೆ ಅದರ ಆಡಳಿತವನ್ನು ಪ್ರತ್ಯೇಕತಾವಾದಿ ಆರ್ಮೇನಿಯನ್ ಜನಾಂಗೀಯರು ನಡೆಸುತ್ತಿದ್ದಾರೆ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯದ ನಿಲುವಾಗಿದೆ.

ತನ್ನ 31 ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಕಳೆದುಕೊಂಡಿದ್ದ ಕೆಲವು ಸ್ಥಳಗಳನ್ನು ಮರುಪಡೆಯಲಾಗಿದೆ ಎಂದು ನಗೋರ್ನೊ-ಕರಬಾಖ್‌ನ ಪ್ರತ್ಯೇಕತಾವಾದಿ ಆಡಳಿತ ಹೇಳಿದೆ.

ಅದೇ ವೇಳೆ, ಆರ್ಮೇನಿಯ ನಡೆಸಿರುವ ಭಾರೀ ಶೆಲ್ ದಾಳಿಗಳಿಂದಾಗಿ ತನ್ನ 26 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಝರ್‌ ಬೈಜಾನ್ ಹೇಳಿದೆ. ಕನಿಷ್ಠ ಐವರು ಮೃತಪಟ್ಟಿದ್ದಾರೆ ಎಂಬುದಾಗಿ ಅದು ಈ ಮೊದಲು ವರದಿ ಮಾಡಿತ್ತು.

ಆರ್ಮೇನಿಯ ಮತ್ತು ಅಝರ್‌ ಬೈಜಾನ್‌ಗಳೆರಡೂ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಸೇನಾಡಳಿತವನ್ನು ಘೋಷಿಸಿವೆ ಹಾಗೂ ಸೈನಿಕರ ಜಮಾವಣೆಗೆ ಆದೇಶ ನೀಡಿವೆ.

2016ರ ಬಳಿಕ ಈ ಪ್ರಮಾಣದ ಯುದ್ಧ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 2016ರ ಸಂಘರ್ಷದಲ್ಲಿ ಕನಿಷ್ಠ 200 ಮಂದಿ ಮೃತಪಟ್ಟಿದ್ದಾರೆ.

ಅಝರ್‌ಬೈಜಾನ್‌ಗೆ ಟರ್ಕಿ ಬೆಂಬಲ

 ಟರ್ಕಿ ಈಗಾಗಲೇ ಅಝರ್‌ ಬೈಜಾನ್‌ಗೆ ಬೆಂಬಲ ಸೂಚಿಸಿದೆ. ಅದೇ ವೇಳೆ, ಆರ್ಮೇನಿಯದಲ್ಲಿ ಸೇನಾ ನೆಲೆಗಳನ್ನು ಹೊಂದಿರುವ ರಶ್ಯ, ತಕ್ಷಣ ಯುದ್ಧವಿರಾಮ ಘೋಷಿಸುವಂತೆ ಉಭಯ ದೇಶಗಳಿಗೆ ಕರೆ ನೀಡಿದೆ.

ಯುದ್ಧವನ್ನು ತಕ್ಷಣ ನಿಲ್ಲಿಸಲು ಗುಟೆರಸ್ ಕರೆ

 ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 28: ನಗೋರ್ನೊ-ಕರಬಾಖ್ ಭೂಭಾಗಕ್ಕೆ ಸಂಬಂಧಿಸಿ ಆರ್ಮೇನಿಯ ಮತ್ತು ಅಝರ್‌ ಬೈಜಾನ್ ದೇಶಗಳ ನಡುವೆ ಹೊಸದಾಗಿ ಯುದ್ಧ ಸ್ಫೋಟಿಸಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ರವಿವಾರ ಹೇಳಿದ್ದಾರೆ.

‘‘ಯುದ್ಧವನ್ನು ತಕ್ಷಣ ನಿಲ್ಲಿಸಿ, ಉದ್ವಿಗ್ನತೆಯನ್ನು ಶಮನಗೊಳಿಸಿ ಅರ್ಥಪೂರ್ಣ ಮಾತುಕತೆಗೆ ಮರಳುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉಭಯ ಪಕ್ಷಗಳಿಗೆ ಕರೆ ನೀಡುತ್ತಾರೆ’’ ಎಂದು ಗುಟೆರಸ್‌ರ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಅಝರ್‌ಬೈಜಾನ್‌ನಿಂದ ಪ್ರತ್ಯೇಕಗೊಂಡ ಭೂಭಾಗ

1990ರ ದಶಕದ ಆದಿ ಭಾಗದಲ್ಲಿ ಪ್ರತ್ಯೇಕತಾವಾದಿ ಆರ್ಮೇನಿಯನ್ ಜನಾಂಗೀಯರು, ನಗೋರ್ನೊ-ಕರಬಾಖ್ ವಲಯವನ್ನು ಅಝರ್‌ಬೈಜಾನ್‌ನಿಂದ ಪ್ರತ್ಯೇಕಿಸಿ ತಮ್ಮದೇ ಆಡಳಿತವನ್ನು ಸ್ಥಾಪಿಸಿದರು.

ಆ ಅವಧಿಯಲ್ಲಿ ನಡೆದ ಭೀಕರ ಸಂಘರ್ಷದಲ್ಲಿ ಸುಮಾರು 30 ಸಾವಿರ ಮಂದಿ ಮೃತಪಟ್ಟರು ಹಾಗೂ ಸುಮಾರು 10 ಲಕ್ಷ ಮಂದಿ ನಿರ್ವಸಿತರಾದರು. ಅದೇ ವೇಳೆ, ಹಲವಾರು ಅಝರ್‌ಬೈಜಾನ್ ಜನಾಂಗೀಯರು ತಮ್ಮ ಮನೆಗಳನ್ನು ತೊರೆದು ಪಲಾಯನಗೈದರು.

ಈಗ ನಗೋರ್ನೊ-ಕರಬಾಖ್ ಸ್ವತಂತ್ರ ವಲಯವಾಗಿದೆ. ಆದರೆ, ಅದು ಬೆಂಬಲಕ್ಕಾಗಿ ಆರ್ಮೇನಿಯವನ್ನು ಅವಲಂಬಿಸಿದೆ. ಆದರೆ, ಈ ವಲಯಕ್ಕೆ ಆರ್ಮೇನಿಯ ಸೇರಿದಂತೆ ವಿಶ್ವಸಂಸ್ಥೆಯ ಯಾವುದೇ ದೇಶ ಮಾನ್ಯತೆ ನೀಡಿಲ್ಲ.

ಸುಮಾರು 4,400 ಚದರ ಕಿಲೋಮೀಟರ್ ವಿಸ್ತೀರ್ಣದ ಗುಡ್ಡಗಾಡು ವಲಯದಲ್ಲಿ ಸಾಂಪ್ರದಾಯಿಕವಾಗಿ ಆರ್ಮೇನಿಯನ್ ಕ್ರೈಸ್ತರು ಮತ್ತು ಮುಸ್ಲಿಮ್ ಟರ್ಕರು ವಾಸಿಸುತ್ತಿದ್ದಾರೆ.

ಸೋವಿಯತ್ ಒಕ್ಕೂಟದ ಸಮಯದಲ್ಲಿ ಅದು ಅಝರ್‌ಬೈಜಾನ್ ರಿಪಬ್ಲಿಕ್‌ನ ಅಧಿನಕ್ಕೆ ಒಳಪಟ್ಟ ಸ್ವಾಯತ್ತ ವಲಯವಾಗಿತ್ತು.

ಅದು ಅಝರ್‌ಬೈಜಾನ್‌ನ ಭಾಗ ಎಂಬುದಾಗಿ ಅಂತರ್‌ರಾಷ್ಟ್ರೀಯ ಸಮುದಾಯ ಮಾನ್ಯತೆ ನೀಡಿದೆ. ಆದರೆ, ಅಲ್ಲಿನ ಬಹುಸಂಖ್ಯಾತ ಜನರು ಆರ್ಮೇನಿಯನ್ ಜನಾಂಗೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News