ಶುಲ್ಕ ಕಟ್ಟಲು ಖಾಸಗಿ ಶಾಲೆಗಳಿಂದ ಒತ್ತಡ, ಬೆದರಿಕೆ: ಪೋಷಕರಿಂದ ಆರೋಪ

Update: 2020-09-28 18:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.29: ಎರಡು ಮೂರು ಕಂತುಗಳ ಶುಲ್ಕವನ್ನು ಒಟ್ಟಿಗೇ ಕಟ್ಟಬೇಕೆಂದು ಖಾಸಗಿ ಶಾಲೆಗಳು ಒತ್ತಡ ಹೇರುತ್ತಿವೆ ಹಾಗೂ ಕಟ್ಟದವರಿಗೆ ಆನ್‍ಲೈನ್ ತರಗತಿಗಳಿಗೆ ಅವಕಾಶ ನೀಡುವುದಿಲ್ಲ, ವರ್ಗಾವಣೆ ಪ್ರಮಾಣ ಪತ್ರ(ಟಿಸಿ) ನೀಡುವುದಿಲ್ಲ ಎಂದು ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ಪೋಷಕರು ಆಪಾದಿಸಿದ್ದಾರೆ.

ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕವನ್ನು ಪಡೆಯುವಂತೆ ಸರಕಾರ ಸೂಚನೆ ನೀಡಿದೆ. ಶುಲ್ಕ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರಬಾರದು ಎಂದೂ ಹೇಳಿದೆ. ಆದರೆ, ಶುಲ್ಕ ಪಾವತಿಸಿಸದಿದ್ದರೆ ಟಿ.ಸಿ ಕೊಟ್ಟು ಕಳಿಸುತ್ತೇವೆ ಎಂದು ಶಾಲಾ ಸಿಬ್ಬಂದಿ ಹೇಳುತ್ತಿದ್ದಾರೆಂದು ಪೋಷಕರೊಬ್ಬರು ಮಾಹಿತಿ ನೀಡಿದ್ದಾರೆ.

ನಗರದ ಖಾಸಗಿ ಶಾಲೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದಾರೆ. ಜೂನ್‍ನಿಂದ ಆಗಸ್ಟ್ ವರೆಗೆ ಮೊದಲ ಕಂತು ಪಾವತಿಸಿದ್ದೇವೆ. ಆಗಲೇ, ಎರಡನೇ ಕಂತು ಕೇಳುತ್ತಿದ್ದಾರೆ. ಇಬ್ಬರು ಮಕ್ಕಳ ಎರಡು ಕಂತುಗಳನ್ನು ಒಮ್ಮೆಲೆ ಕಟ್ಟಲು ಕಷ್ಟವಾಗುತ್ತದೆ. ತಿಂಗಳಿಗೆ ಇಂತಿಷ್ಟು ಪಾವತಿಸಲು ಅವಕಾಶ ಕೇಳಿದರೂ ಶಾಲೆಯವರು ಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ಸರಕಾರದ ನಿರ್ದೇಶನದಂತೆಯೇ ನಾವು ಶುಲ್ಕವನ್ನು ಪಡೆಯುತ್ತಿದ್ದೇವೆ. ಬಹಳಷ್ಟು ಜನರು ಇನ್ನೂ ಮೊದಲ ಕಂತನ್ನೇ ಕಟ್ಟಿಲ್ಲ. ನಾವು ಶಿಕ್ಷಕರಿಗೆ ಸಂಬಳ ನೀಡಬೇಕು. ಆದುದರಿಂದ ಶುಲ್ಕ ಪಾವತಿ ಮಾಡಿದರೆ ಅನುಕೂಲವಾಗುತ್ತದೆ. ಸೆಪ್ಟೆಂಬರ್ ನಿಂದ ಎರಡನೇ ಕಂತು ಪಾವತಿಸಬೇಕು. ಎರಡನೇ ಕಂತು ಪಾವತಿಸಲು ಸಮಯ ನೀಡುತ್ತೇವೆ ಎಂದು ಖಾಸಗಿ ಶಾಲೆಗಳ ಅಭಿಪ್ರಾಯವಾಗಿದೆ.

ಆದೇಶದಲ್ಲಿ ಅಸ್ಪಷ್ಟತೆ: ನಾಲ್ಕು ಕಂತುಗಳಲ್ಲಿ ಶುಲ್ಕ ತೆಗೆದುಕೊಳ್ಳಿ ಎಂದು ಸರಕಾರ ಆದೇಶ ಮಾಡಿದೆ. ಕೇವಲ ಬೋಧನಾ ಶುಲ್ಕವೋ, ಎಲ್ಲ ಶುಲ್ಕಗಳ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಳ್ಳಬೇಕೋ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಲ್ಲದೇ, ಕಳೆದ ವರ್ಷದಷ್ಟೇ ಶುಲ್ಕ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಹೆಚ್ಚು ಶುಲ್ಕ ತೆಗೆದುಕೊಂಡ ಬಗ್ಗೆ ದೂರು ಬಂದ ಶಾಲೆಯವರನ್ನು ವಿಚಾರಿಸಿದರೆ, ಕಳೆದ ವರ್ಷವೂ ಇಷ್ಟೇ ಶುಲ್ಕ ತೆಗೆದುಕೊಂಡಿದ್ದೆವು ಎನ್ನುತ್ತಾರೆ. ಆದೇಶದಲ್ಲಿನ ಅಸ್ಪಷ್ಟತೆಯಿಂದ ಈ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವು ಖಾಸಗಿ ಶಾಲೆಗಳೂ ಸಂಕಷ್ಟದಲ್ಲಿವೆ. ಕಟ್ಟಡದ ಬಾಡಿಗೆ ಪಾವತಿಸಲಾಗದೆ ಬಾಗಿಲು ಮುಚ್ಚುತ್ತಿವೆ. ಶಿಕ್ಷಕರೂ ವೇತನವಿಲ್ಲದೆ ಕಷ್ಟದಲ್ಲಿದ್ದಾರೆ. ಪೋಷಕರ ಹಿತವನ್ನು ಕಾಪಾಡುವುದಕ್ಕೆ ನಾವು ಆದ್ಯತೆ ನೀಡಬೇಕಾಗುತ್ತದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News