ಮೆಹಬೂಬಾರನ್ನು ಎಷ್ಟು ಕಾಲ ಬಂಧನದಲ್ಲಿರಿಸಬಹುದು ?

Update: 2020-09-29 08:23 GMT

ಹೊಸದಿಲ್ಲಿ : ''ಮೆಹಬೂಬಾ ಮುಫ್ತಿ ಅವರನ್ನು ಎಷ್ಟು ಕಾಲ ಬಂಧನದಲ್ಲಿರಿಸಬಹುದು ?'' ಎಂದು ಸುಪ್ರೀಂ ಕೋರ್ಟ್ ಇಂದು ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಪ್ರಶ್ನಿಸಿದೆಯಲ್ಲದೆ ಈ ಕುರಿತು ಪ್ರತಿಕ್ರಿಯಿಸಲು ಅಲ್ಲಿನ ಆಡಳಿತಕ್ಕೆ ನ್ಯಾಯಾಲಯ ಎರಡು ವಾರಗಳ ಕಾಲಾವಕಾಶ ನೀಡಿದೆ.

ಆಕೆಯ ಬಂಧನದ ಅವಧಿ ಒಂದು ವರ್ಷಕ್ಕೂ ಮಿಗಿಲಾಗಿ ವಿಸ್ತರಿಸಲಾಗುವುದೇ ಎಂದೂ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕೇಳಿದೆ.

ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆಯಾಗಿರುವ ಮೆಹಬೂಬಾ ಅವರನ್ನು ಅವರ ಪುತ್ರಿ ಇಲ್ತಿಝಾ ಹಾಗೂ ಪುತ್ರ  ಭೇಟಿಯಾಗಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ತಮ್ಮ ತಾಯಿಯನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಇಲ್ತಿಝಾ ಅವರು ಸಲ್ಲಿಸಿರುವ ಅಪೀಲಿನ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ. ಕಳೆದ ವರ್ಷ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರದ ಬೆಳವಣಿಗೆಯಲ್ಲಿ ಮೆಹಬೂಬಾ ಅವರನ್ನು ದಿಗ್ಬಂಧನದಲ್ಲಿರಿಸಲಾಗಿತ್ತು.

ತಮ್ಮ ತಾಯಿಯನ್ನು ಭೇಟಿಯಾಗಲು ತಮಗೆ ಅವಕಾಶ ನೀಡಲಾಗುತ್ತಿಲ್ಲ, ಆಕೆಯನ್ನು ದಿಗ್ಬಂಧನದಲ್ಲಿರಿಸಿರುವ ಕ್ರಮ ಅಕ್ರಮವಾಗಿದೆ ಎಂದು ಆರೋಪಿಸಿ ಹಾಗೂ ಆಕೆಯನ್ನು ಬಿಡುಗಡೆಗೊಳಿಸುವಂತೆ ಕೋರಿ ಇಲ್ತಿಝಾ ಅಪೀಲು ಸಲ್ಲಿಸಿದ್ದರು.

ಇಲ್ತಿಝಾಗೆ ಯಾವಾಗ ಬೇಕೋ ಆಗ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News