ಬೆಂಗಳೂರು: ಗಾಂಜಾ ಮಾರಾಟ ಆರೋಪ; ಅತಿಥಿ ಉಪನ್ಯಾಸಕ ಸೇರಿ ಮೂವರ ಬಂಧನ

Update: 2020-09-29 11:41 GMT

ಬೆಂಗಳೂರು, ಸೆ.29: ಲಾಕ್‍ಡೌನ್ ಪರಿಣಾಮ ಉದ್ಯೋಗ ಕಳೆದುಕೊಂಡ ಅತಿಥಿ ಉಪನ್ಯಾಸಕನೋರ್ವ ಜೀವನ ನಿರ್ವಹಣೆಗಾಗಿ ಗಾಂಜಾ ಮಾರಾಟಕ್ಕೆ ಇಳಿದಿದ್ದ ಪ್ರಕರಣವೊಂದನ್ನು ಇಲ್ಲಿನ ದಕ್ಷಿಣ ವಿಭಾಗದ ಪೊಲೀಸರು ಭೇದಿಸಿ 127 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ತೆಲಂಗಾಣ ಮೂಲದ ಕಿರಣ್ ಎಂಬಾತ ಅತಿಥಿ ಉಪನ್ಯಾಸಕನಾಗಿದ್ದು, ಮಹಿಪಾಲ್, ಅಸ್ಗರ್ ಖಾನ್ ಎಂಬವರು ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ವಸ್ತು ಮಾರಾಟ, ಸರಬರಾಜು ಮತ್ತು ಸೇವನೆ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಪಿ.ನಗರ ಪೊಲೀಸ್ ಠಾಣೆಯ ಸಿಬ್ಬಂದಿ ತಂಡ ಅಸ್ಗರ್ ಖಾನ್ ಎಂಬಾತನನ್ನು ಬಂಧಿಸಿ, ಆತನಿಂದ ಒಟ್ಟು 649 ಗ್ರಾಂ ತೂಕದ ಮಾದಕ ವಸ್ತು, 1 ಮೊಬೈಲ್ ಮತ್ತು ಮಾರಾಟದಿಂದ ಬಂದಿದ್ದ ನಗದು ಹಣ 440 ರೂ. ವಶಪಡಿಸಿಕೊಂಡಿದ್ದರು.

ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಆತ ತೆಲಂಗಾಣ ರಾಜ್ಯದಿಂದ ಬೀದರ್ ಮೂಲಕ ಬೆಂಗಳೂರಿಗೆ ಹೆಚ್ಚು ಪ್ರಮಾಣದ ಗಾಂಜಾ ಸರಬರಾಜು ಮಾಡಲು ಬಂದಿದ್ದನು. ನಂತರ ಆತನ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿ, 126 ಕೆಜಿ 544 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಬಂಧಿತರ ಪೈಕಿ ಕಿರಣ್ ಮೂಲತಃ ತೆಲಂಗಾಣ ರಾಜ್ಯದವನಾಗಿದ್ದು, ಐಟಿಐ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್-19ನಿಂದ ಕೆಲಸವಿಲ್ಲದೇ ಹಣ ಸಂಪಾದನೆ ಮಾಡುವ ಸಲುವಾಗಿ ಜಹೀರಾಬಾದ್‍ನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬೀದರ್ ಜಿಲ್ಲೆಯ ಹೆದ್ದಾರಿಗಳಲ್ಲಿ ಮಾರಾಟ ಮಾಡುತ್ತಿದ್ದು, ನಂತರ ಹೆಚ್ಚಿನ ಹಣವನ್ನು ಗಳಿಸುವ ಉದ್ದೇಶದಿಂದ ಬೆಂಗಳೂರಿಗೆ ಸರಬರಾಜು ಮಾಡುವ ಸಲುವಾಗಿ ಬೀದರ್ ನಲ್ಲಿ ತನ್ನ ಪರಿಚಿತರ ಕಾರು ಪಡೆದು ಸರಬರಾಜು ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮಹಿಪಾಲ್ ಸಹ ಮೂಲತಃ ತೆಲಂಗಾಣ ರಾಜ್ಯದವನಾಗಿದ್ದು, ಜಹೀರಾಬಾದ್‍ನಲ್ಲಿ ಬಿ.ಎ ವ್ಯಾಸಂಗ ಮಾಡಿದ್ದು, ಕೋವಿಡ್-19ನಿಂದ ಕೆಲಸವಿಲ್ಲದಿದ್ದರಿಂದ ಹಣ ಸಂಪಾದನೆ ಮಾಡಲು ಈ ವೃತ್ತಿಗಿಳಿದಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಭೇದಿಸಿದ ಸಿಬ್ಬಂದಿಯ ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್‍ ಪಂತ್ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಅವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News