ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ: ಹಿಂದೆಂದೂ ಹೀಗೆ ಆಗಿರಲಿಲ್ಲ ಎಂದ ವೈದ್ಯರು

Update: 2020-09-29 16:04 GMT

 ಹೊಸದಿಲ್ಲಿ,ಸೆ.29: ಭಾರತದಲ್ಲಿ ಕೊರೋನ ವೈರಸ್ ಸೋಂಕು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಹಬ್ಬುತ್ತಿದ್ದರೆ ಹಲವಾರು ರಾಜ್ಯಗಳಲ್ಲಿಯ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕಕ್ಕಾಗಿ ಪರದಾಡುತ್ತಿವೆ. ತಯಾರಕರು ಪೂರೈಕೆ ಮತ್ತು ಸಾಗಾಣಿಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೆಣಗಾಡುತ್ತಿದ್ದಾರೆ.

ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುವ ಹೆಚ್ಚಿನ ಸ್ಥಾವರಗಳು ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿದ್ದು,ನಿಬಿಡ ಜನಸಾಂದ್ರತೆಯ ಉತ್ತರ ಮತ್ತು ಮಧ್ಯ ಭಾರತಗಳ ಹೆಚ್ಚಿನ ಪ್ರದೇಶಗಳು ಅಗತ್ಯ ಆಮ್ಲಜನಕದ ತುರ್ತು ವಿತರಣೆಯಿಂದ ವಂಚಿತವಾಗಿವೆ.

ಹೆಚ್ಚುಕಡಿವೆು ಬ್ರೆಝಿಲ್‌ನಷ್ಟೇ ಒಟ್ಟು ಜನಸಂಖ್ಯೆ (ಸುಮಾರು 20 ಕೋಟಿ)ಯನ್ನು ಹೊಂದಿರುವ ದಿಲ್ಲಿ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಆಮ್ಲಜನಕವನ್ನು ತಯಾರಿಸುವ ಒಂದೇ ಒಂದು ಘಟಕವಿಲ್ಲ.

ಮಾರ್ಚ್‌ನಲ್ಲಿ ಭಾರತದಲ್ಲಿ ಸುಮಾರು 1,300 ದೃಢೀಕೃತ ಕೊರೋನ ವೈರಸ್ ಪ್ರಕರಣಗಳಿದ್ದಾಗ ದೇಶದಲ್ಲಿ ದಿನವೊಂದಕ್ಕೆ 750 ಟನ್ ಆಮ್ಲಜನಕ ಬಳಕೆಯಾಗುತ್ತಿತ್ತು. ಸೆಪ್ಟಂಬರ್ ತಿಂಗಳಿನಲ್ಲಿ ಈ ಪ್ರಮಾಣ 2,800 ಟನ್‌ಗಳಿಗೆ ಏರಿಕೆಯಾಗಿದೆ. ಇದು ನಮ್ಮ ಪೂರೈಕೆ ಮತ್ತು ಸಾಗಾಣಿಕೆ ವ್ಯವಸ್ಥೆಯ ಮೇಲೆ ಅಗಾಧ ಒತ್ತಡವನ್ನು ಹೇರಿದೆ ಎಂದು ಅಖಿಲ ಭಾರತ ಕೈಗಾರಿಕಾ ಅನಿಲಗಳ ತಯಾರಕರ ಸಂಘದ ಅಧ್ಯಕ್ಷ ಸಾಕೇತ್ ಟಿಕು ತಿಳಿಸಿದರು.

ವೈದ್ಯಕೀಯ ದರ್ಜೆಯ ಹೆಚ್ಚು ಆಮ್ಲಜನಕ ತಯಾರಿಕೆಗೆ ಒತ್ತಡದ ಜೊತೆಗೆ ತಯಾರಕರು ಸೀಮಿತ ಸಂಖ್ಯೆಯಲ್ಲಿರುವ ಶೈತ್ಯಜನಕ ಟ್ಯಾಂಕರ್‌ಗಳ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ದೇಶವು ಈವರೆಗೆ ಹೇಗೋ ನಿಭಾಯಿಸಿದೆ,ಆದರೆ ಇನ್ನು ಮುಂದೆ ಆಮ್ಲಜನಕ ಬಳಕೆಯ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಿದೆ ಎಂದರು.

ದೇಶದಲ್ಲಿ ಈಗ ಆಮ್ಲಜನಕದ ಕೊರತೆಯುಂಟಾಗಿರುವುದು ತಜ್ಞರನ್ನು ಅಚ್ಚರಿಗೀಡು ಮಾಡಿದೆ.

“ಸಿದ್ಧತೆಗಳನ್ನು ಮಾಡಿಕೊಳ್ಳಲು ನಮಗೆ ಹಲವಾರು ತಿಂಗಳುಗಳ ಕಾಲಾವಕಾಶವಿತ್ತು. ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಮ್ಲಜನಕ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದ್ದು,ಈ ಬಗ್ಗೆ ಸರಿಯಾದ ಲೆಕ್ಕಾಚಾರವಿರಬೇಕಿತ್ತು” ಎಂದು ದಿಲ್ಲಿ ಮತ್ತು ವಾಷಿಂಗ್ಟನ್ ಡಿಸಿಯಲ್ಲಿರುವ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಇಕನಾಮಿಕ್ಸ್ ಆ್ಯಂಡ್ ಪಾಲಿಸಿಯ ನಿರ್ದೇಶಕ ರಮಣನ್ ಲಕ್ಷ್ಮೀನಾರಾಯಣ ಹೇಳಿದರು.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಇಷ್ಟೊಂದು ಕೊರತೆಯ ಸ್ಥಿತಿ ಈ ಹಿಂದೆಂದೂ ಉಂಟಾಗಿರಲಿಲ್ಲ. ಈ ಹಿಂದಿನ ನಾಲ್ಕು ದಶಕಗಳಲ್ಲಿ ಇಷ್ಟೊಂದು ಅಭಾವ ಎಂದೂ ಉಂಟಾಗಿರಲಿಲ್ಲ ಎಂದು ಮುಂಬೈನ ನಿರಾಮಯ ಆಸ್ಪತ್ರೆಯ ಸರ್ಜನ್ ಅಮಿತ್ ಥಡಾನಿ ಉದ್ಗರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News