ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಎನ್‍ಐಎ ತನಿಖೆಗೆ ಸಹಕಾರ ನೀಡಲು ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2020-09-29 13:10 GMT

ಬೆಂಗಳೂರು, ಸೆ.29: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿ ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳ ಕುರಿತು ಎನ್‍ಐಎ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಬೇಕು ಮತ್ತು ಘಟನೆಯಲ್ಲಿ ಆಗಿರುವ ನಷ್ಟವನ್ನು ವಸೂಲಿ ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡಬೇಕು ಎಂದು ಕೋರಿ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣವನ್ನು ಯುಎಪಿಎ ಕಾಯ್ದೆ ಅಡಿ ದಾಖಲಿಸಿದ್ದು, ಈ ಪ್ರಕರಣಗಳನ್ನು ಎನ್‍ಐಎ ತನಿಖೆಗೆ ವಹಿಸಲಾಗಿದೆ ಎಂಬ ಕೇಂದ್ರದ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ, ಎನ್‍ಐಎ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳು ಹಾಗೂ ಮಾಹಿತಿಯನ್ನು ರಾಜ್ಯ ಸರಕಾರ ನೀಡಬೇಕು. ತನಿಖೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಬೇಕು ಎಂದು ನಿರ್ದೇಶಿಸಿತು. ಹಾಗೆಯೇ ಎನ್‍ಐಎ ಕೈಗೊಂಡ ತನಿಖೆಯ ವರದಿಯನ್ನು ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಇನ್ನು, ಗಲಭೆಯಲ್ಲಿ ಆಗಿರುವ ನಷ್ಟವನ್ನು ಅಂದಾಜಿಸಿ ನಷ್ಟದ ಹೊಣೆಗಾರಿಕೆಯನ್ನು ನಿಗದಿಪಡಿಸಲು ಹಾಗೂ ನಷ್ಟ ಪರಿಹಾರ ನೀಡಲು ರಾಜ್ಯ ಸರಕಾರ ನೇಮಿಸಿರುವ ಕ್ಲೇಮ್ ಕಮಿಷನರ್ ಅವರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ವಿಚಾರಣಾ ಆಯೋಗಗಳ ಕಾಯ್ದೆ-1952ರ ಸೆಕ್ಷನ್ 11ರ ಅಡಿ ಲಭ್ಯವಿರುವಂತೆ ಕ್ಲೇಮ್ ಕಮಿಷನರ್ ಅವರಿಗೆ ದಾಖಲೆಗಳನ್ನು ತರಿಸಿಕೊಳ್ಳಲು, ಸಮನ್ಸ್ ಜಾರಿ ಮಾಡಲು ಅಧಿಕಾರ ನೀಡಿ ಸರಕಾರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಅ.20ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News