ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್ ಸಿಗುವ ವಿಶ್ವಾಸವಿದೆ: ಡಾ.ಕೆ.ಸುಧಾಕರ್

Update: 2020-09-29 13:11 GMT

ಬೆಂಗಳೂರು, ಸೆ.29: ಪಕ್ಷದ ಭರವಸೆಯಂತೆ ಮುನಿರತ್ನ ಅವರಿಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧವಿಲ್ಲದೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಶಾಸಕ ಸ್ಥಾನ ತ್ಯಜಿಸಿ ಸರಕಾರ ರಚನೆಗಾಗಿ ಕೊಡುಗೆ ನೀಡಿದ್ದಾರೆ. ಆ ವೇಳೆ ನೀಡಿದ ಭರವಸೆಯಂತೆ ಹಿರಿಯ ನಾಯಕರು ಖಂಡಿತ ನ್ಯಾಯಯುತವಾದ ತೀರ್ಮಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಉಪ ಚುನಾವಣೆಯಲ್ಲಿ ಗೆದ್ದ ನಮ್ಮೆಲ್ಲರಿಗೂ ಭರವಸೆಯಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಮುನಿರತ್ನ ಅವರಿಗೂ ಈ ಬಾರಿ ಯಾವುದೇ ಅನ್ಯಾಯವಾಗುವುದಿಲ್ಲ. ಯಾರಿಗೆ ಆದ್ಯತೆ ನೀಡಬೇಕು ಎಂಬುದು ಪಕ್ಷದ ನಾಯಕರಿಗೆ ತಿಳಿದಿದೆ ಎಂದು ಸುಧಾಕರ್ ಹೇಳಿದರು.

ಪಕ್ಷದ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾಕರ್, ನಮ್ಮ ನಾಯಕ ಯಡಿಯೂರಪ್ಪ ಸದೃಢರಾಗಿದ್ದಾರೆ, ನಾಯಕತ್ವ ಬದಲಾವಣೆ ಹೇಳಿಕೆಯ ಊಹಾಪೋಹಗಳಿಗೆ ಕಿವಿಗೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗಷ್ಟೇ ಅಗಲಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರನ್ನು ರಾಜಕೀಯವಾಗಿ ಎಳೆದು ತರುವುದು ಸರಿಯಲ್ಲ. ಅವರ ಕುಟುಂಬಸ್ಥರು ಈ ನೋವಿನಿಂದ ಇನ್ನೂ ಹೊರಬಂದಿಲ್ಲ, ಹೀಗಿರುವಾಗ ಅವರ ಹೆಸರನ್ನು ರಾಜಕೀಯವಾಗಿ ಬಳಸಬೇಡಿ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲೂ ನಾವೆ ಗೆಲ್ಲುತ್ತೇವೆ, ಮುಂದಿನ 10 ವರ್ಷ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಲ್ಲೆ ಕೂರಿಸುತ್ತೇವೆ ಎಂದು ಯಡಿಯೂರಪ್ಪ ದಿಟ್ಟ ಉತ್ತರ ನೀಡಿದ್ದರೂ ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡುವರೇ ಎಂದು ಅವರು ಪ್ರಶ್ನಿಸಿದರು.

ಡಿಜಿಟಲ್ ಮೂಲಕ ರಾಜಕೀಯ ಪ್ರಚಾರ: ಉಪಚುನಾವಣೆಗಿಂತ ಕೊರೋನ ನಿಯಂತ್ರಣ ಅವಶ್ಯವಾದ್ದರಿಂದ ಉಪಚುನಾವಣೆ ಪ್ರಚಾರದ ವೇಳೆ ಎಲ್ಲ ಪಕ್ಷಗಳು ಜಾಗೃತಿ ವಹಿಸಿ, ಡಿಜಿಟಲ್ ಮೂಲಕ ಪ್ರಚಾರ ನಡೆಸಿದರೆ ಉತ್ತಮ ಎಂದು ಸುಧಾಕರ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News