ಅ.1ರಿಂದ ಗ್ರಾಮೋದ್ಯೋಗ ಉಳಿಸಿ ಆಂದೋಲನ: ಪ್ರಸನ್ನ ಹೆಗ್ಗೋಡು

Update: 2020-09-29 15:44 GMT

ಬೆಂಗಳೂರು, ಸೆ.29: ಗ್ರಾಮೋದ್ಯೋಗ ಉತ್ಪನ್ನಗಳ ಮೊದಲ ಪ್ರದರ್ಶನ ಮಾರಾಟವು ಗಾಂಧಿ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಗಾಂಧಿ ಭವನದ ಆವರಣದಲ್ಲಿ ಅಕ್ಟೊಬರ್ 1ರಿಂದ 4ರವರೆಗೆ ನಡೆಯಲಿದೆ. ಪ್ರದರ್ಶನ ಮಾರಾಟದೊಟ್ಟಿಗೆ ಗಾಂಧಿಭವನದಲ್ಲಿ ಚರ್ಚಾಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೊಡುಕೊಳ್ಳುವವರ ಸಮಾವೇಶ ಕೂಡ ನಡೆಯಲಿದೆ.

ನಗರದ ಗಾಂಧೀ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮ ಸೇವಾ ಸಂಘದ ಪ್ರಸನ್ನ ಹೆಗ್ಗೋಡು, ಚರಕ ಕೈಮಗ್ಗ ಸಹಕಾರ ಸಂಘದ ಮಹಿಳೆಯರು ಇತ್ತೀಚೆಗೆ ಹೆಗ್ಗೋಡಿನಲ್ಲಿ ನಡೆಸಿದ ಚಾರಿತ್ರಿಕ ಹೋರಾಟದಿಂದ ಪ್ರೇರಿತವಾಗಿ ಗ್ರಾಮ ಸೇವಾ ಸಂಘವು ಗ್ರಾಮೋದ್ಯೋಗ ಉಳಿಸಿ ಎಂಬ ರಾಜ್ಯವ್ಯಾಪಿ ಆಂದೋಲನವೊಂದಕ್ಕೆ ಕರೆ ನೀಡಲಾಗಿದೆ. ಗ್ರಾಮ ಕೇಂದ್ರಿತ ಹೋರಾಟವನ್ನು ಗ್ರಾಮೋದ್ಯೋಗಿ ಬಡವರು ಮುನ್ನಡೆಸಲಿದ್ದಾರೆ ಎಂದರು.

ಗ್ರಾಮ ಕೈಗಾರಿಕೆ (ಹಾಗೂ ನಗರಗಳ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ) ಪುನಶ್ಚೇತನವಾಗಲಿ ಎಂಬ ಆಶಯದಿಂದ ನಡೆದಿರುವ ಈ ಹೋರಾಟವು ಗ್ರಾಮ ಪಂಚಾಯತ್ ಗಳ ಮುಂದೆ ಶಾಂತಿಯುತ ಸತ್ಯಾಗ್ರಹಗಳನ್ನು ನಡಸಲಿದೆ. ಗ್ರಾಮೀಣ ಆರ್ಥಿಕತೆಯ ದುಸ್ಥಿತಿಯನ್ನು ಎತ್ತಿ ತೋರಿಸಬಲ್ಲ ಹತ್ತು ಪ್ರಶ್ನೆಗಳನ್ನು ಜನ ಪ್ರತಿನಿಧಿಗಳೆದುರು ಕೇಳಲಾಗುತ್ತದೆ. ನಗರ ಕೇಂದ್ರಿತ ಆಂದೋಲನವನ್ನು ಪ್ರಜ್ಞಾವಂತ ಗ್ರಾಹಕರು ಮುನ್ನಡೆಸಲಿದ್ದಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕೈಉತ್ಪನ್ನಗಳನ್ನೇ ಕೊಳ್ಳಿರಿ ಎಂದು ಜನತೆಗೆ ಕರೆ ನೀಡಲಿದ್ದಾರೆ. ರಾಜ್ಯಾದ್ಯಂತ ಕೈಉತ್ಪನ್ನಗಳ ಪ್ರದರ್ಶನ ಮಾರಾಟಗಳನ್ನು ಏರ್ಪಡಿಸಲಿದ್ದಾರೆ ಎಂದು ಅವರು ವಿವರಿಸಿದರು.

ವಸ್ತ್ರವಿನ್ಯಾಸ, ಸಿದ್ಧ ಉಡುಪಿನ ವಿನ್ಯಾಸ, ಕರಕುಶಲ ವಸ್ತುಗಳು ಹಾಗೂ ಕೃಷಿ ಉತ್ಪನ್ನಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೆಸರಾಂತ ವಿನ್ಯಾಸಕಾರರು, ಆರ್ಥಿಕ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು ಗ್ರಾಹಕ ಚಳುವಳಿಯ ನೇತೃತ್ವ ವಹಿಸಲಿದ್ದಾರೆ. ಗ್ರಾಮ ಸೇವಾ ಸಂಘದೊಟ್ಟಿಗೆ, ಪಿ.ಜಿ.ಎಸ್ ಸಂಸ್ಥೆ (ಪಾರ್ಟಿಸಿಪೇಟರಿ ಗ್ಯಾರಂಟಿ ಸಿಸ್ಟಮ್ಸ್) ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕೈಜೋಡಿಸಿ ಚಳುವಳಿಯ ನೇತೃತ್ವ ವಹಿಸಲಿವೆ ಎಂದು ಪ್ರಸನ್ನ ವಿವರಿಸಿದರು.

ಅ.2 ರಿಂದ ಎರಡನೆಯ ಪ್ರದರ್ಶನ ಮಾರಾಟವು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಹೊಯ್ಸಳ ವೃತ್ತದ ಬಳಿ ಸ್ಥಾಪಿತವಾಗಿರುವ ‘ಕರಸ್ಥಲ’ ಆವರಣದಲ್ಲಿ ಆರಂಭವಾಗಲಿದೆ ಹಾಗೂ ಖಾಯಂ ಆಗಿ ಅಲ್ಲಿ ನೆಲೆಗೊಳ್ಳಲಿದೆ. ಮೂರನೆಯ ಪ್ರದರ್ಶನ ಮಾರಾಟವು ಕೋವಿಡ್ ಸಂದರ್ಭದಲ್ಲಿ ಸ್ತಗಿತಗೊಂಡಿದ್ದ ವಾರಾಂತ್ಯದ ಮಾರುಕಟ್ಟೆಯಾದ ರಾಗಿಕಣ ಸಂತೆಯ ಪುನರಾರಂಭದ ಮುಖಾಂತರ ಅ.4 ರಂದು ನಡೆಯಲಿದೆ. ಇದೇ ರೀತಿಯ ಪ್ರದರ್ಶನ ಮಾರಾಟಗಳು ರಾಜ್ಯಾದ್ಯಂತ ಏರ್ಪಾಡುಗೊಳ್ಳಲಿವೆ ಎಂದು ಅವರು ಹೇಳಿದರು.

ಗ್ರಾಮೋದ್ಯೋಗ ಕ್ಷೇತ್ರದ ಪ್ರಗತಿಯಲ್ಲಿ ಕರ್ನಾಟಕವು ದಕ್ಷಿಣ ಭಾರತದ ಇತರೆ ರಾಜ್ಯಗಳಿಗಿಂತ ಕೆಳಮಟ್ಟ ತಲುಪಿದೆಯಲ್ಲ ಏಕೆ? ಗ್ರಾಮೀಣ ಉದ್ಯೋಗಗಳನ್ನು ಗಟ್ಟಿಗೊಳಿಸದೆ ರಾಜ್ಯವು ಸರ್ವಾಂಗೀಣ ಪ್ರಗತಿ ಸಾಧಿಸುವುದು ಸಾಧ್ಯವೆ? ಕೋವಿಡ್ ಮಾರಿಯ ಸಂದರ್ಭದಲ್ಲಿ ಪಕ್ಕದ ಆಂದ್ರ ರಾಜ್ಯವು ಉದ್ಯೋಗ ವಂಚಿತರಾದ ಪ್ರತಿ ಗ್ರಾಮೋದ್ಯೋಗಿಗಳಿಗೆ ಉದ್ಯೋಗ ನಷ್ಟಕ್ಕೆ ಪ್ರತಿಯಾಗಿ ಇಪ್ಪತ್ನಾಲ್ಕು ಸಾವಿರ ರೂಪಾಯಿಗಳನ್ನು ಹಂಚಿಕೆ ಮಾಡಿದರಲ್ಲವೆ? ನಾವೇಕೆ ಕೇವಲ ಎರಡು ಸಾವಿರ ರೂಪಾಯಿ ಹಂಚಿಕೆ ಮಾಡಿದೆವು, ಅದೂ ತೀವ್ರ ಅಸಮರ್ಥ ರೀತಿಯಲ್ಲಿ ಹಂಚಿಕೆ ಮಾಡಿದೆವು. ಕೇರಳ ರಾಜ್ಯವು ಗ್ರಾಮೋದ್ಯೋಗಿಗಳನ್ನು ನರೇಗಾ ಯೋಜನೆಯಡಿಯಲ್ಲಿ ತಂದು ಅವರ ಮಾಸಿಕ ವರಮಾನವು ದುಪ್ಪಟ್ಟಾಗುವಂತೆ ಮಾಡಿದರಲ್ಲವೇ, ನಾವೇಕೆ ಹಾಗೆ ಮಾಡುತ್ತಿಲ್ಲ?

ಸರಕಾರಿ ಶಾಲೆಗಳ ಬಡಮಕ್ಕಳಿಗೆ ನೀಡಲೆಂದು ಅಗತ್ಯವಿರುವ ಸಮವಸ್ತ್ರದ ಬಟ್ಟೆಯನ್ನು ನಮ್ಮದೇ ಕೈಮಗ್ಗ ನೇಕಾರರಿಂದ ಕೊಳ್ಳುವಲ್ಲಿ ರಾಜ್ಯ ಸರಕಾರವು ಪದೇ ಪದೇ ವಿಫಲವಾಗುತ್ತಿದೆಯಲ್ಲವೇ ಕಾರಣವೇನು? ಹೋಗಲಿ, ವಿದ್ಯುತ್ ಮಗ್ಗದ ವಸ್ತ್ರವನ್ನು ಖರೀದಿಸುವಾಗಲೂ ಸಹ, ವಿವಿಧ ಸಬೂಬುಗಳನ್ನು ನೀಡಿ, ರಾಜ್ಯದ ವಿದ್ಯುತ್ ಮಗ್ಗಗಳ ಮಾಲಕರು ಹಾಗೂ ಕಾರ್ಮಿಕರನ್ನು ಉದ್ಯೋಗವಂಚಿತರನ್ನಾಗಿಸಿ, ಹೊರ ರಾಜ್ಯಗಳಿಂದ ಬಟ್ಟೆ ಖರೀದಿಸುತ್ತಿದ್ದೇವಲ್ಲ ಏಕೆ? ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮವು ದಲ್ಲಾಲಿ ಕೆಲಸ ಮಾಡುತ್ತಿದೆಯಲ್ಲ ಏಕೆ ? ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News