ಆರನೇ ದಿನಕ್ಕೆ ಕಾಲಿಟ್ಟ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ

Update: 2020-09-29 16:27 GMT

ಬೆಂಗಳೂರು, ಸೆ.29: ನೌಕರಿ ಕಾಯಂಗೊಳಿಸುವುದು, ಇಲಾಖೆ ಮೂಲಕ ನೇರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಕೆಲಸ ಸ್ಥಗಿತ ಅನಿರ್ದಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿರಿಸಿದೆ.

ರಾಜ್ಯದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿ ಸೋಂಕು ಪರೀಕ್ಷೆಯಲ್ಲಿ ಇಳಿಮುಖವಾಗಿ ರೋಗಿಗಳು ಸರಿಯಾದ ರೀತಿ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಯುವೇದ ಹೊರ ಗುತ್ತಿಗೆ ವೈದ್ಯರು ಕೂಡ ಮುಷ್ಕರದಲ್ಲಿ ಭಾಗಿಯಾಗಿದ್ದರು.

ಈ ಕುರಿತು ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಮಾತನಾಡಿ, ನೌಕರರ ಬೇಡಿಕೆಯನ್ನು ಈಡೇರಿಸದೆ ಸರಕಾರ ಸರ್ವಾಧಿಕಾರ ಧೋರಣೆ ತೋರುತ್ತಿದೆ. ಅಧಿಕಾರಿಗಳ ಮೇಲೆ ತರ್ತು ಪರಿಸ್ಥಿತಿಯ ವಾತಾವರಣವನ್ನು ಹೇರುತ್ತಿದ್ದಾರೆ.  ಕೆಲಸದಿಂದ ತೆಗೆದು ಹಾಕುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನೆಪಮಾತ್ರಕ್ಕೆ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರಕಾರದಿಂದ ನೇಮಿಸಲಾಗಿದ್ದ ಮಾನವ ಸಂಪನ್ಮೂಲ ಸಮಿತಿಯ ಅವಧಿಯನ್ನು ಮಾತ್ರ ವಿಸ್ತರಿಸಲಾಗಿದೆ. ಆದರೆ ಸರಕಾರದ ಈ ನಿರ್ಧಾರ ತಮಗೆ ಸ್ವಾಗತಾರ್ಹವಾಗಿಲ್ಲ. ಸ್ಪಷ್ಟವಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ತಮ್ಮ ಮುಷ್ಕರರವನ್ನು ಮುಂದುವರಿಸುವುದಾಗಿ ನೌಕರರ ಸಂಘ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News